ಶಿವಮೊಗ್ಗ | ಸಾಗಾಟದದ ವೇಳೆ ಬಿದ್ದ ಕರುವನ್ನು ಕಿಲೋಮೀಟರ್ಗಟ್ಟಲೆ ಎಳೆದೊಯ್ದ ವಾಹನ

ಕ್ರೈಂ

ಶಿವಮೊಗ್ಗದಿಂದ ಅಶೋಕ್ ಲೈಲಾಂಡ್ ವಾಹನದಲ್ಲಿ ನಾಲ್ಕು ದನಗಳು ಹಾಗೂ ಒಂದು ಕರುವನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಕರು ಆಯತಪ್ಪಿ ವಾಹನದಿಂದ ಕೆಳಗೆ ಬಿದ್ದಿದೆ. ಆದರೆ ಕರುವಿನ ಕತ್ತಿಗೆ ಕಟ್ಟಿದ್ದ ಹಗ್ಗ ವಾಹನಕ್ಕೆ ಸಂಪರ್ಕದಲ್ಲಿದ್ದ ಕಾರಣ, ವಾಹನ ಚಲಿಸುತ್ತಿದ್ದಂತೆ ಕರು ರಸ್ತೆಯ ಮೇಲೆ ಎಳೆದೊಯ್ಯಲ್ಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಟಾರ್ ರಸ್ತೆಯಲ್ಲಿ ಕರುವನ್ನು ಎಳೆದೊಯ್ಯಲಾಗಿದ್ದರಿಂದ ಅದರ ದೇಹದ ಚರ್ಮ ಸುಲಿದು, ತೀವ್ರ ರಕ್ತಸ್ರಾವವಾಗಿದೆ. ರಕ್ತದ ಮಡುವಿನಲ್ಲಿ ನರಳುತ್ತಿದ್ದ ಕರುವನ್ನು ಸ್ಥಳೀಯರು ಗಮನಿಸಿ ವಾಹನವನ್ನು ತಡೆದಿದ್ದಾರೆ.ವಾಹನವನ್ನು ತಡೆದು ಚಾಲಕನನ್ನು ಪ್ರಶ್ನಿಸಿದ ವೇಳೆ ವಾಗ್ವಾದ ಉಂಟಾಗಿದ್ದು, ಸ್ಥಳೀಯರು ಚಾಲಕನ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.ಈ ನಡುವೆ, ಸ್ಥಳದಲ್ಲಿದ್ದ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ನಿಕಟಪೂರ್ವ ಸದಸ್ಯ ನಿರೂಪ್ ಕುಮಾರ್ ಅವರು ತಕ್ಷಣ ಸ್ಪಂದಿಸಿ ಖಾಸಗಿ ಪಶು ಪರಿವೀಕ್ಷಕ ಶರತ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಗಾಯಗೊಂಡ ಕರುವಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ರಿಪ್ಪನ್‌ಪೇಟೆ ಪಶು ಆಸ್ಪತ್ರೆಗೆ ರವಾನಿಸಲಾಗಿದೆ.ಕರುವಿನ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದುಗೊತ್ತಾಗಿದೆ

Author