ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ ಹೋಬಳಿ ಸಮಟಗಾರು ಎಂಬ ಪುಟ್ಟ ಹಳ್ಳಿ ಈಗ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದೆ ಎಂಬುದು ಕರ್ನಾಟಕ ರಾಜ್ಯದ ಹೆಮ್ಮೆಯ ವಿಷಯವಾಗಿದೆ. ಸಮಟಗಾರು ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರತ್ನಕುಮಾರಿಯವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಮತ್ತು ಊರಿಗೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಉತ್ತಮ ಹೆಸರನ್ನುಗಳಿಸಿಕೊಟ್ಟಿದ್ದಾರೆ.

ಬಹಳ ಮುಖ್ಯವಾಗಿ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಸಹ ಸಮಟಗಾರು ಎಂಬ ಈ ಪುಟ್ಟ ಹಳ್ಳಿಯ ರಸ್ತೆಗೆ ಡಾಂಬರೀಕರಣವಾಗದೆ ಮಹಿಳೆಯರು, ಮಕ್ಕಳು, ವೃದ್ಧರು ಕಷ್ಟ ಅನುಭವಿಸುತ್ತಾ ಬಂದಿದ್ದಾರೆ. ಅಂದಾಜು ಒಂದೂವರೆ ಅಥವಾ ಎರಡು ಕಿಲೋಮೀಟರ್ ಕಚ್ಚಾ ರಸ್ತೆಯಲ್ಲಿಯೇ ಮಕ್ಕಳು, ಮಹಿಳೆಯರು, ವೃದ್ಧರು ನಡೆದುಕೊಂಡು ಹೋಗುವುದು ಒಂದು ರೀತಿಯ ಸವಾಲಾಗಿದೆ ಎಂದರೆ ತಪ್ಪಾಗಲಾರದು.
ಸಮಟಗಾರು ಎಂಬ ಈ ಪುಟ್ಟ ಹಳ್ಳಿಗೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯಾಗಿ ಬಂದ ಶ್ರೀಮತಿ ರತ್ನಕುಮಾರಿಯವರು ಈ ಕಚ್ಚಾ ರಸ್ತೆಯಲ್ಲಿ ಬಿಸಿಲು, ಮಳೆ, ಚಳಿ, ಗಾಳಿ ನಡುವೆ ಮಕ್ಕಳ ಜೊತೆ ನಡೆದುಕೊಂಡೆ ಶಾಲೆಗೆ ಬಂದು ತಮ್ಮ ಕಾರ್ಯಕ್ಷಮತೆಯನ್ನು ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಮಾಡುವ ಮೂಲಕ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಷಯವಾಗಿದೆ. ಬಹಳ ಮುಖ್ಯವಾಗಿ ಕಡಸೂರು ಕಡೆಯಿಂದ ಬರುವ ರಸ್ತೆಗೆ ಶಾಲಾ ಗೇಟಿನವರೆಗೆ ಮಾತ್ರ ಡಾಂಬರೀಕರಣವಾಗಿದೆ ಆದರೆ ಗೇಟಿನಿಂದ ಸಮಟಗಾರು ಕಡೆಗೆ ಹೋಗುವ ರಸ್ತೆಗೆ ಡಾಂಬರೀಕರಣವಾಗಿಲ್ಲ ಎಂದು ನೈಜ ಹೋರಾಟಗಾರರ ವೇದಿಕೆ ದೂರಿದೆ.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಗೌರವಾನ್ವಿತ ಸಚಿವರಾದ ತಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸದರಿ ರಸ್ತೆಗೆ ಡಾಂಬರೀಕರಣ ಮತ್ತು ಬೀದಿ ದೀಪಗಳನ್ನು ಅಳವಡಿಸುವ ಮೂಲಕ ಇಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮತ್ತು ಈ ಊರಿನ ಮಹಿಳೆಯರಿಗೆ, ವೃದ್ಧರಿಗೆ ಯಾವುದೇ ಅಡೆ ತಡೆ ಇಲ್ಲದೆ ಸುಲಲಿತವಾಗಿ ಸಂಚರಿಸಲು ತಾವು ಅವಕಾಶ ಕಲ್ಪಿಸಿಕೊಡಬೇಕೆಂದು ನೈಜಹೋರಾಟಗಾರರ ವೇದಿಕೆ ತಮ್ಮಲ್ಲಿ ವಿನಯಪೂರ್ವಕವಾಗಿ ನೈಜ ವೇದಿಕೆ ಆಗ್ರಹ ಪಡಿಸುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊಟ್ಟಮೊದಲ ಬಾರಿಗೆ ಸಮಟಗಾರು ಎಂಬ ಈ ಪುಟ್ಟ ಹಳ್ಳಿಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಶ್ರೀಮತಿ ರತ್ನಕುಮಾರಿಯವರಿಗೆ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ.
ಅದೇ ರೀತಿ ಸ್ವತಂತ್ರ ಭಾರತದ ಈ ಪುಟ್ಟ ಹಳ್ಳಿಯ ರಸ್ತೆಗೆ ಮೊಟ್ಟ ಮೊದಲ ಬಾರಿ ಡಾಂಬರೀಕರಣ, ಬೀದಿ ದೀಪಗಳನ್ನು ಅಳವಡಿಸುವ ಮೂಲಕ ತಾವು ಈ ಹಳ್ಳಿಯ ಮಹಿಳೆಯರಿಗೆ, ವೃದ್ಧರಿಗೆ ಮತ್ತು ಶಾಲೆಯ ಮಕ್ಕಳಿಗೆ. ಶಿಕ್ಷಕರಿಗೂ ಬಹಳ ದೊಡ್ಡ ಸಹಾಯಹಸ್ತ ಚಾಚಿದಂತಾಗುತ್ತದೆ ಮತ್ತು ಈ ಹಳ್ಳಿಯ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಗುರುತರ ಜವಾಬ್ದಾರಿಯು ನಾಗರಿಕ ಸರ್ಕಾರದ್ದಾಗಿರುತ್ತದೆ ಎಂದು ನೈಜ ವೇದಿಕೆ ತಿಳಿಸಿದೆ.

ಈ ವಿಷಯದ ಬಗ್ಗೆ ತಾವು ಆದಷ್ಟು ಶೀಘ್ರವಾಗಿ ಕ್ರಮಗಳನ್ನು ಕೈಗೊಂಡು ಈ ಹಳ್ಳಿಯ ರಸ್ತೆಯ ಸರ್ವತೋಮುಖ ಅಭಿವೃದ್ಧಿಗೆ ತಾವು ಮುಖ್ಯಪಾತ್ರ ವಹಿಸಬೇಕೆಂದು ನೈಜ ಹೋರಾಟಗಾರರ ವೇದಿಕೆಯು ತಮ್ಮಲ್ಲಿ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತಿದೆ ಎಂದಿರುತ್ತಾರೆ.





