ಶಿವಮೊಗ್ಗ, ಕೌಟಂಬಿಕ ಕಲಹದ ಹಿನ್ನೆಲೆ ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ತುಂಗಾ ನದಿಗೆ ಹಾರಿದ ಘಟನೆ ಸೋಮವಾರ ನಡೆದಿದೆ.ಶಿವಮೊಗ್ಗದ ಅರಕೆರೆಯ ದೇವಾಲಯ ಪಕ್ಕದ ರೈಲ್ವೆ ಸೇತುವೆ ಬಳಿ ತಾಯಿ ತನ್ನ ಮೂವರು ಮಕ್ಕಳೂಂದಿಗೆ ನದಿಗೆ ಹಾರಿದ್ದು, ಇದನ್ನು ಗಮನಿಸಿದ ನವೀನ್ ಹಾಗೂ ದಾದಪೀರ್ ಎಂಬ ಯುವಕರು ತಮ್ಮ ಜೀವದ ಹಂಗು ತೊರೆದು ನದಿಗೆ ಹಾರಿದ್ದ ತಾಯಿ ಹಾಗೂ 11 ತಿಂಗಳ ಗಂಡು ಮಗುವನ್ನು ರಕ್ಷಿಸಿದ್ದಾರೆ. ಆದರೆ, 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳು ನದಿಯಲ್ಲಿ ತೇಲಿ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ಥಳಕ್ಕೆ ಕೋಟೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಶೋಧ ನಡೆಸಲು ಮುಂದಾದರು. ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣದಿಂದ ಶೋಧ ಕಾರ್ಯ ನಡೆಸಲು ಆಗದೇ ವಾಪಸ್ ಅಗಿದ್ದಾರೆ.ಕೌಟಂಬಿಕ ಕಲಹದ ಹಿನ್ನೆಲೆ ಚಿತ್ರದುರ್ಗ ಮೂಲದ ಭವಾನಿ ಎಂಬ ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ನದಿಗೆ ಹಾರಿದ್ದು, ತಾಯಿ ಹಾಗೂ ಒಂದು ಮಗುವನ್ನು ರಕ್ಷಿಸಲಾಗಿದೆ. ರಕ್ಷಣೆಗೆ ಒಳಗಾದ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಹಾಲಿ ದಾವಣಗೆರೆ ಜಿಲ್ಲೆಯ ಸವಳಂಗದಲ್ಲಿ ನೆಲೆಸಿದ್ದರು ಎಂಬುವುದು ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಎಎಸ್ಪಿ ಕಾರ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಯಿ ಮತ್ತು ಮಗವನ್ನು ರಕ್ಷಿಸಿದ ದಾದಾಪೀರ್ ಮಾತನಾಡಿ, ”ರೈಲ್ವೆ ಬ್ರಿಡ್ಜ್ನಿಂದ ತಾಯಿಯೊಬ್ಬಳು ತನ್ನ ಮೂವರು ಮಕ್ಕಳನ್ನು ಹಿಡಿದುಕೊಂಡು ನದಿಗೆ ಹಾರಿದ್ದರು. ಈ ದೃಶ್ಯ ಕಂಡ ತಕ್ಷಣ ನಾವು ನದಿಗೆ ಹಾರಿ ತಾಯಿ ಮತ್ತು ಒಂದು ಮಗುವನ್ನು ಕಾಪಾಡಿದ್ದೇವೆ. ಆದರೆ, ಇಬ್ಬರು ಮಕ್ಕಳನ್ನು ಕಾಪಾಡಲು ಸಾಧ್ಯವಾಗಲಿಲ್ಲ. ನದಿಗೆ ಹಾರಿದ್ದು ಏಕೆ ಎಂಬ ಬಗ್ಗೆ ಕಾರಣ ಗೊತ್ತಿಲ್ಲ. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೂ ಅಷ್ಟು ಸಹಾಯ ಮಾಡಿದ್ದೇವೆ. ತಾಯಿ-ಮಗುವನ್ನು ಸೇಫ್ ಮಾಡಿದ್ದೇವೆ. ಮಹಿಳೆ ಚಿತ್ರದುರ್ಗದವರು ಎಂಬ ಮಾಹಿತಿ ಇದೆ” ಎಂದು ಹೇಳಿದರು.
ನಿನ್ನೆ ತುಂಗಾ ನದಿಯ ರೈಲ್ವೆ ಸೇತುವೆ ಬಳಿ ನಡೆದ ಹೃದಯವಿದ್ರಾವಕ ಘಟನೆ ಇಂದು ಬೆಳಗ್ಗೆಯೂ ನೋವಿನ ನೆರಳನ್ನು ಮುಂದುವರಿಸಿದೆ. ತಾಯಿ ಭವಾನಿ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿದ ಘಟನೆಯಲ್ಲಿ ತಾಯಿ ಮತ್ತು 11 ವರ್ಷದ ಗಂಡು ಮಗು ಬದುಕುಳಿದಿದ್ದರೂ, ನೀರಿನಲ್ಲಿ ಕೊಚ್ಚಿಹೋದ ಇಬ್ಬರು ಹೆಣ್ಣು ಮಕ್ಕಳಿಗಾಗಿ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಕಣ್ಣೀರಿನ ನಡುವೆ ಶೋಧ ನಡೆಸುತ್ತಿದ್ದಾರೆ.
ಬೆಳಗ್ಗೆಯೇ ಮಕ್ಕಳ ಸಂಬಂಧಿಕರು ತುಂಗಾ ನದಿ ತಟದಲ್ಲಿ ಜಮಾಯಿಸಿದ್ದಾರೆ. ತಮ್ಮವರನ್ನು ಕಳೆದುಕೊಳ್ಳುವ ಆತಂಕ, ಮಕ್ಕಳನ್ನು ಹೇಗಾದರೂ ಪತ್ತೆ ಮಾಡಬೇಕೆಂಬ ಹಂಬಲ—ಇವೆರಡರ ನಡುವೆ ಕುಟುಂಬಸ್ಥರು ನದಿಯತ್ತ ಕಣ್ಣಿಟ್ಟು ಕುಳಿತಿದ್ದಾರೆ. ಅವರ ನೋವಿಗೆ ಸ್ಪಂದಿಸಿರುವ ಸಾರ್ವಜನಿಕರೂ ಶೋಧ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ನದಿಯ ಪ್ರತಿಯೊಂದು ಅಲೆ, ಪ್ರತಿಯೊಂದು ತಿರುವು ಹಾಗೂ ದಡದ ಪ್ರತಿಯೊಂದು ಭಾಗವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಮಕ್ಕಳು ಪತ್ತೆಯಾಗಬಹುದೆಂಬ ನಿರೀಕ್ಷೆಯಲ್ಲಿ ಶೋಧ ಮುಂದುವರಿದಿದೆ.“ನನ್ನ ಮಕ್ಕಳನ್ನು ಹುಡುಕಿಕೊಡಿ…” ಎಂಬ ತಾಯಿಯ ಆಕ್ರಂದನ, ನದಿ ತಟದಲ್ಲಿ ಸೇರಿರುವ ಪ್ರತಿಯೊಬ್ಬರ ಮನಸ್ಸನ್ನೂ ಕಲುಕುವಂತಾಗಿದೆ.

ನಿನ್ನೆ ನಡೆದ ಘಟನೆಯ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಇಂದು ಮಕ್ಕಳಿಗಾಗಿ ನಡೆಯುತ್ತಿರುವ ಹುಡುಕಾಟದ ದೃಶ್ಯ ಕಂಡು ಸ್ಥಳೀಯರ ಕಣ್ಣುಗಳು ತೇವವಾಗಿವೆ.ಈ ಹೃದಯವಿದ್ರಾವಕ ಘಟನೆಯು ಕೌಟುಂಬಿಕ ಸಮಸ್ಯೆಗಳು ಯಾವ ಹಂತಕ್ಕೆ ಕೊಂಡೊಯ್ಯಬಹುದು ಎಂಬುದರ ಬಗ್ಗೆ ಮತ್ತೊಮ್ಮೆ ಸಮಾಜವನ್ನು ಆತ್ಮಾವಲೋಕನಕ್ಕೆ ಒಳಪಡಿಸಿದೆ.





