ಶಿವಮೊಗ್ಗದ ಕಸ್ತೂರಬಾ ಕಾಲೇಜು ಪ್ರಾಂಶುಪಾಲನ ವಿರುದ್ಧ ಪೋಕ್ಸೋ ಕೇಸು ದಾಖಲಾಗಿದೆ. ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೋ ಹಾಗೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ 17 ವರ್ಷದ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಜು. 18 ಹಾಗೂ 20ರಂದು ಕಾಲೇಜಿಗೆ ಗೈರಾಗಿದ್ದ ವಿದ್ಯಾರ್ಥಿನಿ, ಜು. 21ರಂದು ಕಾಲೇಜಿಗೆ ತೆರಳಿದಾಗ ಆಕೆಯೊಂದಿಗೆ ಹಾಗೂ ಇತರೆ ಕೆಲವು ವಿದ್ಯಾರ್ಥಿನಿಯರೊಂದಿಗೆ ಸೇರಿ ಪ್ರಾಂಶುಪಾಲ ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದ ಎಂದು ಆರೋಪಿಸಲಾಗಿದೆ.
ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮುಂದೆ ಆಕೆಗೆ ಮುಜುಗರ ಉಂಟಾಗುವ ರೀತಿಯಲ್ಲಿ ನಿಂದನೆ ಜೊತೆಗೆ ವೈಯಕ್ತಿಕ ವಿಚಾರಗಳ ಕುರಿತು ಮಾತನಾಡಿದ್ದ ಎನ್ನಲಾಗಿದೆ.ಈ ವಿದ್ಯಾರ್ಥಿನಿಗೆ ಕೈಕುಲುಕುವುದು, ಹೆಗಲ ಮೇಲೆ ಕೈ ಹಾಕುವುದು ಹಾಗೂ ಸೊಂಟಕ್ಕೆ ಕೈ ಹಾಕುವುದು ಸೇರಿದಂತೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಕೂಡ ಆರೋಪಿಸಲಾಗಿದ್ದು, ಪೊಲೀಸ್ ಠಾಣೆಯಲ್ಲಿ ನೀಡಿರುವ ಸಾರಾಂಶದಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಆ.18ರಂದು ವಿದ್ಯಾರ್ಥಿನಿಯಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಈ ಕುರಿತು ಮಕ್ಕಳ ರಕ್ಷಣ ಸಮಿತಿಯೂ ಸಹ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದೆ.ಅದರಂತೆ ಕಾಲೇಜು ಮುಂಭಾಗ ಎಬಿವಿಪಿ ಸಂಘಟನೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದು, ದಲಿತ ಸಂಘರ್ಷ ಸಮಿತಿ ವತಿಯಿಂದಲೂ ದೂರು ಸಲ್ಲಿಕೆಯಾಗಿದೆ.
ಕಾಮುಕ ಪ್ರಾಂಶುಪಾಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದ್ದು, ಪ್ರಾಂಶುಪಾಲನನ್ನು ಅಮಾನತ್ತು ಮಾಡಿ, ಕಾನೂನು ಕ್ರಮಕ್ಕೆ ಡಿಎಸ್ಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.





