ಶಿವಮೊಗ್ಗದಲ್ಲಿ ಮತ್ತೊಂದು ಆಟೋ ಪ್ರೀ-ಪೇಯ್ಡ್ ಕೌಂಟರ್‌ಗೆ ಅಧಿಕೃತವಾಗಿ ಚಾಲನೆ ನೀಡಿದ ಎಸ್ಪಿ ನಿಖಿಲ್. ಬಿ

ಶಿವಮೊಗ್ಗ

ಶಿವಮೊಗ್ಗ ಆಟೋ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವುದನ್ನು ತಡೆಗಟ್ಟುವ ಹಾಗೂ ಪ್ರಯಾಣಿಕರಿಗೆ ಪಾರದರ್ಶಕ ಮತ್ತು ನಿಗದಿತ ದರದಲ್ಲಿ ಆಟೋ ಸೇವೆ ಒದಗಿಸುವ ಉದ್ದೇಶದಿಂದ ಶಿವಮೊಗ್ಗ ನಗರದ ಶಿವಪ್ಪನಾಯಕನ ಸರ್ಕಲ್‌ನಲ್ಲಿ ಆಟೋ ಪ್ರೀ-ಪೇಯ್ಡ್ ಕೌಂಟರ್‌ಗೆ ಶನಿವಾರ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ, ಶಿವಮೊಗ್ಗ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಸಾರಿಗೆ ಇಲಾಖೆಯ ಸಂಯುಕ್ತ ಸಹಯೋಗದಲ್ಲಿ ಭೀಮ ಗೋಲ್ಡ್ ಸಂಸ್ಥೆಯ ಸಹಕಾರದೊಂದಿಗೆ ಈ ಆಟೋ ಪ್ರೀ-ಪೇಯ್ಡ್ ಕೌಂಟರ್ ನಿರ್ಮಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ. ನಿಖಿಲ್ ಅವರು ಕೌಂಟರ್‌ಗೆ ಅಧಿಕೃತವಾಗಿ ಚಾಲನೆ ನೀಡಿದರು.

ಆಟೋ ಪ್ರಯಾಣಿಕರಿಗೆ ನಿಗದಿತ ದರದಲ್ಲಿ ಸೇವೆ ದೊರೆಯುವಂತೆ ಮಾಡುವುದರ ಜೊತೆಗೆ, ಹೆಚ್ಚುವರಿ ಶುಲ್ಕ ವಸೂಲಿ ಸೇರಿದಂತೆ ಉಂಟಾಗಬಹುದಾದ ಸಮಸ್ಯೆಗಳನ್ನು ನಿಯಂತ್ರಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇದರಿಂದ ಪ್ರಯಾಣಿಕರಿಗೆ ಆಟೋ ಸೇವೆಯಲ್ಲಿ ಹೆಚ್ಚಿನ ಪಾರದರ್ಶಕತೆ ದೊರೆಯಲಿದ್ದು, ಪ್ರಯಾಣ ಮತ್ತಷ್ಟು ಸುರಕ್ಷಿತ ಹಾಗೂ ಸುಗಮವಾಗಲಿದೆ.

ನಗರದ ಪ್ರಮುಖ ವೃತ್ತಗಳಲ್ಲಿ ಒಂದಾದ ಶಿವಪ್ಪನಾಯಕನ ಸರ್ಕಲ್‌ನಲ್ಲಿ ಆರಂಭಿಸಿರುವ ಪ್ರೀ-ಪೇಯ್ಡ್ ಕೌಂಟ‌ರ್ ಮೂಲಕ ಪ್ರಯಾಣಿಕರು ತಮ್ಮ ಗಮ್ಯಸ್ಥಾನಕ್ಕೆ ನಿಗದಿತ ದರದಲ್ಲಿ ಆಟೋ ಸೇವೆ ಪಡೆಯಲು ಅನುಕೂಲವಾಗಲಿದೆ. ಈ ವ್ಯವಸ್ಥೆಯು ಪ್ರಯಾಣಿಕರು ಮತ್ತು ಆಟೋ ಚಾಲಕರ ನಡುವೆ ದರಕ್ಕೆ ಸಂಬಂಧಿಸಿದಂತೆ ಉಂಟಾಗಬಹುದಾದ ಗೊಂದಲಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ..!

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ ಶಿವಮೊಗ್ಗ ‘ಬಿ’ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಸಂಜುಕುಮಾ‌ರ್, ಶಿವಮೊಗ್ಗ ಸಂಚಾರ ವೃತ್ತದ ಪೊಲೀಸ್‌ ಇನ್ಸ್‌ಪೆಕ್ಟ‌ರ್ ದೇವರಾಜ್ ಟಿ.ವಿ., ಅಕ್ಟರ್ ಮುಲ್ಲಾ ಪೂರ್ವ ಸಂಚಾರ ಪೊಲೀಸ್‌ ಠಾಣೆಯ ಪೊಲೀಸ್ ಉಪನಿರೀಕ್ಷಕಿ ಭಾರತಿ ಸೇರಿದಂತೆ ಠಾಣೆಯ ಸಿಬ್ಬಂದಿ, ಭೀಮ ಗೋಲ್ಡ್ ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Author