ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕಾರಕ.! : ಅರೋಗ್ಯ ಸಚಿವರೇ ರಾಜ್ಯದಲ್ಲಿ ಮದ್ಯ ನಿಷೇಧಿಸಿ, ಜನರ ಅರೋಗ್ಯ ಕಾಪಾಡಿ : ನೈಜ ಹೋರಾಟಗಾರರ ವೇದಿಕೆ ಮನವಿ

ಕರ್ನಾಟಕ

ಬೆಂಗಳೂರು,ಶುಚಿತ್ವ ಇಲ್ಲದ ಕಳಪೆ ಮತ್ತು ಕೆಮಿಕಲ್ ಮಿಶ್ರಿತ ಆಹಾರವನ್ನು ಮಾರಾಟ ಮಾಡುತ್ತಿರುವ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಜನರ ಆರೋಗ್ಯವನ್ನು ಕಾಪಾಡುವ ಆರೋಗ್ಯ ಸಚಿವರಾದ ತಾವು “ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ” ಎಂಬ ಮಧ್ಯದ ಬಾಟಲಿಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸುವಂತೆ ನೈಜ ಹೋರಾಟಗಾರರ ವೇದಿಕೆ ಮನವಿ ಮಾಡಿದೆ.

ಗೌರವಾನ್ವಿತ ಆರೋಗ್ಯ ಸಚಿವರಾದ ತಾವು ಆರೋಗ್ಯ ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ಮೇಲೆ ರಾಜ್ಯದ ನಾಗರಿಕರಿಗೆ ಉತ್ತಮ ಗುಣಮಟ್ಟದ ಪೌಷ್ಟಿಕ ಮತ್ತು ಶುಚಿತವುಳ್ಳ ಶುದ್ಧ ಆಹಾರವನ್ನು ಜನರಿಗೆ ನೀಡುವ ಉದ್ದೇಶದಿಂದ ಕರ್ನಾಟಕದಲ್ಲಿ ಜನರಿಗೆ ಗೊತ್ತಿಲ್ಲದೇ ಇರುವ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ, ಸೂಚನೆ ನೀಡಿ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಕಳಪೆ ಆಹಾರ, ಕೆಮಿಕಲ್ ಬಣ್ಣ ಹಾಕಿದ ಆಹಾರ ಮತ್ತು ಕಲಬೆರಿಕೆ ಆಹಾರವನ್ನು ಸರಬರಾಜು ಮಾಡುತ್ತಿರುವ ಹೋಟೆಲ್ ಮಾಲೀಕರಗಳಿಗೆ ಎಚ್ಚರಿಕೆ ನೀಡಿ ಅಡಿಗೆ ಮನೆಯ ಸ್ವಚ್ಛತೆ, ಶುಚಿತ್ವದ ಬಗ್ಗೆ ಅವರ ಗಮನವನ್ನು ನೀಡುವುದರ ಜೊತೆಗೆ ಅವರಿಗೆ ನೋಟಿಸ್ ನೀಡಿ ಕಾನೂನು ಪ್ರಕ್ರಿಯೆಯನ್ನು ಜಾರಿಗೊಳಿಸಿದ್ದೀರಿ.

ಮತ್ತು ಗುಟ್ಕಾ, ಪಾನ್ ಪರಾಗ್ ಸೇವನೆಯಿಂದ ಬಾಯಿ ಕ್ಯಾನ್ಸರ್ ಬರುವುದರ ಜೊತೆಗೆ ಎಲ್ಲೆಂದರಲ್ಲಿ ಜನರು ಉಗುಳುವ ಮೂಲಕ ಪರಿಸರವನ್ನು ಹಾಳು ಮಾಡುತ್ತಿದ್ದರು ಇದನ್ನು ನಿಷೇಧ ಮಾಡುವ ಮೂಲಕ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ತಮ್ಮ ಕೊಡುಗೆ ಅಪಾರವಾಗಿದೆ.

ತಮ್ಮ ಕಾರ್ಯಚಟುವಟಿಕೆಗಳಿಗೆ ನೈಜ ಹೋರಾಟಗಾರರ ವೇದಿಕೆಯು ತಮ್ಮನ್ನು ಅಭಿನಂದಿಸುತ್ತದೆ. ಮಾಧ್ಯಮಗಳಲ್ಲಿ ತಾವು ಮಾತನಾಡುತ್ತಾ ಪೆಪ್ಸಿ ಅಂತ ಪಾನಿಯಗಳನ್ನು ಮಕ್ಕಳಿಗೆ ಕೊಡುವುದರಿಂದ ಅವರ ಆರೋಗ್ಯ ಹಾನಿಯಾಗುವುದರ ಬಗ್ಗೆ ಕಾಳಜಿವಹಿಸಿದ್ದೀರಿ. ಶುದ್ಧ ಆಹಾರವನ್ನು ಮಕ್ಕಳಿಗೆ ಕೊಡುವಂತೆ ಪೋಷಕರಿಗೆ ಕಿವಿಮಾತನ್ನು ಸಹ ಹೇಳಿದ್ದೀರಿ. ಇದು ಕೂಡ ಅತ್ಯಂತ ಶ್ಲಾಘನೀಯ ಎಂದಿದ್ದಾರೆ.

ಆದರೆ ಸರ್ಕಾರದ ದ್ವಂದ್ವ ನೀತಿಗಳು ಜನರ ಕಣ್ಣಿಗೆರಚ್ಚುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಮದ್ಯಪಾನ ಸೇವನೆ ಆರೋಗ್ಯಕ್ಕೆ ಹಾನಿಕರ ಎಂದು “ಮಧ್ಯದ ಬಾಟಲಿಯ ಮೇಲೆ ಮುದ್ರಿಸಿ” ರಾಜ್ಯದ ನಾಗರಿಕರಿಗೆ ಮಾರಾಟ ಮಾಡುತ್ತಿರುವ ಸರ್ಕಾರವು ಜನರ ಆರೋಗ್ಯವನ್ನು ಹದಗೆಡಿಸುತ್ತಿಲ್ಲವೇ? ಎಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಇಂತಹ ಹಾನಿಕಾರಕ ಮದ್ಯವನ್ನು ಸರಬರಾಜು ಮಾಡುವಲ್ಲಿ ರಾಜ್ಯ ಸರ್ಕಾರದ ಆಸಕ್ತಿ ನೋಡಿದರೆ ಜನರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲವೆಂದು ಎನಿಸುವುದಿಲ್ಲವೇ? ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತಿಯಾಗಿ ತೆರಿಗೆ ಬರುವುದೇ ಈ ಮಧ್ಯ ಮಾರಾಟದಿಂದ ಎಂಬ ವಿಷಯವೂ ನಮ್ಮ ಗಮನಕ್ಕೆ ಇದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಆರೋಗ್ಯ ಇಲಾಖೆ ಹಾಗೂ ಆದರ ಮುಖ್ಯಸ್ಥರ ತಾವು, ಈ ಮದ್ಯ ಮಾರಾಟ ನಿಷೇಧದ ಬಗ್ಗೆ ಏಕೆ ಗಮನಹರಿಸುತ್ತಿಲ್ಲ? ಎಂಬುದು ತಿಳಿಯುತ್ತಿಲ್ಲವೆಂದು ಆರೋಪಿಸಿದೆ.

ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಶುದ್ಧ ಮತ್ತು ಗುಣಮಟ್ಟದ ಆಹಾರವನ್ನು ಮಾರಾಟ ಮಾಡುವಂತೆ ಹೇಳುವ ಆರೋಗ್ಯ ಸಚಿವರಾದ ತಾವು “ಜನರ ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುವ ಮದ್ಯ ಮಾರಾಟ” ಮಾಡುವುದನ್ನು ತಡೆಗಟ್ಟಬೇಕಾದ ಗುರುತರ ಜವಾಬ್ದಾರಿ ಅಲ್ಲವೇ?ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಬಾಟಲಿಗಳ ಮೇಲೆ ಮುದ್ರಿಸಿ, ಮಾರಾಟ ಮಾಡುತ್ತಿರುವುದು ಗಮನಿಸಿದರೆ ಜನರ ಆರೋಗ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕೂಲಿ ಕಾರ್ಮಿಕರು, ಕೆಳಮಧ್ಯಮ ವರ್ಗದವರು, ಬಡತನ ರೇಖೆಗಿಂತ ಕೆಳಗಿರುವ ಕೂಲಿ ಕಾರ್ಮಿಕರು ತಮ್ಮ ದುಡಿಮೆಯ ಶೇಕಡ 50ರಷ್ಟು ಹಣವನ್ನು ಮದ್ಯ ಸೇವನೆಗೆ ವ್ಯಯ ಮಾಡಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಪ್ರತಿನಿತ್ಯ ಆರೋಗ್ಯಕ್ಕೆ ಹಾನಿಕರವಾದ ಮಧ್ಯವನ್ನು ಸೇವಿಸಿ ಕ್ಯಾನ್ಸರ್, ಕರುಳಿನ ರೋಗ, ಮೂತ್ರಪಿಂಡ ರೋಗ ಇನ್ನಿತರ ಮರಣಾಂತಿಕ ಕಾಯಿಲೆಗಳಿಗೆ ತುತ್ತಾಗಿರುವುದು ಸರ್ಕಾರಿ ಆಸ್ಪತ್ರೆಗಳಿಂದಲೇ ತಿಳಿದು ಬರುತ್ತದೆ.ಸರ್ಕಾರದ ದ್ವಂದ್ವ ನೀತಿಯನ್ನು ನೋಡಿದರೆ ನಾಗರೀಕರ ಆರೋಗ್ಯಕ್ಕಿಂತ ಖಜಾನೆ ತುಂಬುವ ಕೆಲಸಕ್ಕೆ ಹೆಚ್ಚಿನ ಆಸಕ್ತಿ ಸರ್ಕಾರ ಹೊಂದಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಂದಲೇ ಆಯ್ಕೆಯಾಗಿ ಪ್ರಜೆಗಳಿಗಾಗಿಯೇ ನಡೆಸುವ ಸರ್ಕಾರ ಪ್ರಜೆಗಳಿಗೆ ಆರೋಗ್ಯಕ್ಕೆ ಹಾನಿಕಾರಕವಾದ ಮದ್ಯವನ್ನು ಸರಬರಾಜು ಮಾಡುವ ಮೂಲಕ ನಾಗರೀಕರ ಜೀವ ಮತ್ತು ಜೀವನದ ಜೊತೆ ಚೆಲ್ಲಾಟವಾಡುತ್ತಿದೆ.1969 ರಲ್ಲಿ ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಕಾರ್ಯನಿರ್ವಹಿಸಿದ ಶ್ರೀಮತಿ ಯಶೋಧರ ದಾಸಪ್ಪ ನವರು ಸರ್ಕಾರವು ಮದ್ಯಪಾನ ನಿಷೇಧವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದಾಗ, ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಗಾಂಧಿವಾದಿ ತತ್ವಗಳನ್ನು ಎತ್ತಿಹಿಡಿದವರು ಶ್ರೀಮತಿ ಯಶೋಧರ ದಾಸಪ್ಪನವರು ಜನರ ಆರೋಗ್ಯದ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ವ್ಯಕ್ತಪಡಿಸಿದ್ದರು.

ಆದರೆ ಇಂದಿನ ದಿನಮಾನಗಳಲ್ಲಿ ಪ್ರಸ್ತುತ ಶಾಸಕರಾಗಿದ್ದ ಶ್ರೀ ಶಿವಲಿಂಗೇಗೌಡರು ಈ ಹಿಂದೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಮದ್ಯಪಾನ ಸರಬರಾಜು ಮಾಡುವುದರ ಮೂಲಕ ಗ್ರಾಮೀಣ ಪ್ರದೇಶದಿಂದ ಸುಮಾರು ಶೇ. 17% ಅಷ್ಟು ಹಣ ಸರ್ಕಾರದ ಖಜಾನೆಗೆ ಬರುತ್ತಿದ್ದು ಇಂತಹ ಪಾಪದ ಹಣದಿಂದ ನಾವು ಸರ್ಕಾರವನ್ನು ನಡೆಸುತ್ತಿರುವುದು ಅತ್ಯಂತ ಖೇದಕರ ಎಂದು ಹೇಳಿದ್ದರು.

ಬದಲಾದ ಸನ್ನಿವೇಶದಲ್ಲಿ ದುರಾದೃಷ್ಟವಶಾತ್, ಶಾಸಕರಾದ ಶ್ರೀ ಶಿವಲಿಂಗೇಗೌಡರು ಮದ್ಯ ಮಾರಾಟದಿಂದ ಬರುವ ಪಾಪದ ಹಣವನ್ನು ಖಜಾನೆಗೆ ತುಂಬಿಸುವ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದು ನೋಡಿದರೆ ನಗಬೇಕೋ? ಅಳಬೇಕೋ? ಗೊತ್ತಾಗುತ್ತಿಲ್ಲ!!

ಈ ಎಲ್ಲಾ ಹಿನ್ನೆಲೆಯಲ್ಲಿ ಸರ್ಕಾರದ ದ್ವಂದ್ವ ನೀತಿಯನ್ನು ಸರಿಪಡಿಸಿ ಕರ್ನಾಟಕ ರಾಜ್ಯವನ್ನು ಮದ್ಯಪಾನ ಮುಕ್ತ ಕರ್ನಾಟಕ ಮಾಡಲು ಆರೋಗ್ಯ ಸಚಿವರಾದ ತಾವು ಅತ್ಯಂತ ಪ್ರಮುಖ ಪಾತ್ರ ವಹಿಸಿ ರಾಜ್ಯದ ನಾಗರೀಕರ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕುಡಿತದಿಂದ ನಡೆಯುವ ದಾಂಪತ್ಯ ಕಲಹ, ನೆರೆ ಹೊರೆಯುವರೊಂದಿಗೆ ನಡೆಯುವ ಜಗಳ ಮತ್ತು ಕೊಲೆ, ,ಬಡತನ, ಅನಾರೋಗ್ಯ, ಇದನ್ನು ನೋಡುತ್ತಿರುವ ಮುಗ್ಧ ಮಕ್ಕಳ ಮೇಲೆ ಆಗುವ ದುಷ್ಪರಿಣಾಮಕ್ಕೆ ತಾವು ಇತಿಶ್ರೀ ಹಾಡಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆ ತಮ್ಮಲ್ಲಿ ವಿನಯ ಪೂರ್ವಕವಾದ ಆಗ್ರಹ ಪಡಿಸುತ್ತಿದೆ.

ಗೌರವಾನ್ವಿತ ಆರೋಗ್ಯ ಸಚಿವರಾದ ತಾವು ಈ ಪತ್ರ ದಲ್ಲಿರುವ ಸಾರಾಂಶವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಸಚಿವ ಸಂಪುಟದಲ್ಲಿ ಕರ್ನಾಟಕವನ್ನು ಮಧ್ಯ ರಹಿತ ಮತ್ತು ಆರೋಗ್ಯಕರ ರಾಜ್ಯವೆಂದು ಗುರುತಿಸುವಂಥ ಕೆಲಸ ನಿಮ್ಮಿಂದಲೇ ಆಗಬೇಕು ಎಂಬುದು ನಮ್ಮ ಮನವಿಯಾಗಿದೆ.

Author