ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸ್ವೀಕಾರ ಕೇಂದ್ರದ 1776 ಹೆಣ್ಣು ಮಕ್ಕಳು ನಾಪತ್ತೆ ಪ್ರಕರಣದಲ್ಲಿ ಶಾಮಿಲಾದ ಐಎಎಸ್, ಕೆಎಎಸ್ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನೈಜ ಹೋರಾಟಗಾರರ ವೇದಿಕೆ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಹಿಳಾ ಆಯೋಗ, ಡಿಐಜಿ ಮತ್ತು ಲೋಕಾಯುಕ್ತಕ್ಕೆ ನೀಡಿದ ದೂರು. ಈ ಮೇಲ್ಕಂಡ ವಿಷಯ ಮತ್ತು ಉಲ್ಲೇಖದನ್ವಯ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಮಹಿಳೆಯರ ಸ್ವೀಕಾರ ಕೇಂದ್ರದಿಂದ ಸುಮಾರು 1776 ಅಪ್ರಾಪ್ತ ಮತ್ತು ಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಸರ್ಕಾರದ ಐಎಎಸ್ ಅಧಿಕಾರಿಗಳ ಮನೆಗಳಿಗೆ ಕೆಲಸ ನಿರ್ವಹಿಸಲು ಕಳುಹಿಸಿಕೊಟ್ಟ ನಂತರ ಅವರು ವಾಪಾಸ್ ಸ್ವೀಕಾರ ಕೇಂದ್ರಕ್ಕೆ ಬಾರದೆ ನಾಪತ್ತೆಯಾಗಿರುವ ಪ್ರಕರಣದ ಜಾಡನ್ನು ಹಿಡಿದು ಮಾಹಿತಿಯನ್ನು ಕಲೆ ಹಾಕಿದ ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ಈ ಮೇಲ್ಕಂಡ ಉಲ್ಲೇಖದಲ್ಲಿ ದೂರನ್ನು ಸಲ್ಲಿಸಿದರು ಸಹ ಈವರೆಗೂ ಯಾವುದೇ ಕಾನೂನು ಕ್ರಮಗಳನ್ನು ಜರುಗಿಸಿರುವುದಿಲ್ಲ. “ಬೇಟಿ ಪಡಾವೋ ಬೇಟಿ ಬಚಾವೋ” ಎಂಬ ದೇಶದ ಪ್ರಧಾನಮಂತ್ರಿಯವರ ಘೋಷಣೆ ಘೋಷಣೆಯಾಗಿ ಉಳಿದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದಿದ್ದಾರೆ.
ಕರ್ನಾಟಕ ರಾಜ್ಯ ಸರ್ವ ಶಕ್ತಿ ಸಮಿತಿಯು ನೀಡಿದ ದೂರಿನ ಅನ್ವಯ ಕನ್ನಡ ದಿನಪತ್ರಿಕೆ “ವಾರ್ತಾಭಾರತಿ” ಮತ್ತು “ದ ಫೈಲ್” ಸಮಗ್ರವಾದ ಸರಣಿ ವರದಿಯನ್ನು ಪ್ರಕಟಿಸಿದೆ.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಅನಾಥ ಹೆಣ್ಣು ಮಕ್ಕಳು, ಪ್ರೇಮ ವೈಫಲ್ಯದಿಂದ ಮನೆ ಬಿಟ್ಟು ಓಡಿ ಹೋಗುವ ಹೆಣ್ಣು ಮಕ್ಕಳು, ಬಡತನದಿಂದ ಒಂದು ಹೊತ್ತಿನ ಊಟಕ್ಕಾಗಿ ಭಿಕ್ಷೆ ಬೇಡುವ ಹೆಣ್ಣು ಮಕ್ಕಳು ಮತ್ತು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬರುವ ಹೆಣ್ಣು ಮಕ್ಕಳನ್ನು ಮೆಜೆಸ್ಟಿಕ್ ಅಂತ ದೊಡ್ಡ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಸಂಚರಿಸುವ ಏನು ತಿಳಿಯದ ಮುಗ್ಧ ಹೆಣ್ಣು ಮಕ್ಕಳನ್ನು ತೊಳಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಅವರನ್ನು ರಕ್ಷಿಸಿ ಸ್ವೀಕಾರ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುತ್ತದೆ, ಅಲ್ಲಿ ಹೋದ ಹೆಣ್ಣು ಮಕ್ಕಳು ಲೈಂಗಿಕ ಕಿರುಕುಳ ಅತ್ಯಾಚಾರ ಇನ್ನಿತರ ಕಿರುಕುಳಗಳಿಗೆ ಒಳಗಾಗಿ ಅಧಿಕಾರಿಗಳೇ ಅವರನ್ನು ಅತ್ಯಾಚಾರಕ್ಕೆ ಪ್ರೋತ್ಸಾಹಿಸುವ ಬಗ್ಗೆ ದೂರಿನಲ್ಲಿ ಹೇಳಲಾಗಿದೆ ಎಂದು ಆರೋಪಿಸಿದ್ದಾರೆ.
ಇದು ಕರ್ನಾಟಕ ರಾಜ್ಯ ಮಾತ್ರವಲ್ಲ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಈ ಪ್ರಕರಣವು ಮಹಿಳೆಯರ ಸುರಕ್ಷತೆಗೆ ಮತ್ತು ಅವರ ಜೀವ ಮತ್ತು ಜೀವನದ ಮೇಲೆ ಭಯಾನಕವಾದ ಕರಿ ನೆರಳು ಬಿದ್ದಿದೆ.
ನಾಗರೀಕ ಸಮಾಜ ತಲೆತಗ್ಗಿಸುವಂತಹ ಈ ಪ್ರಕರಣದಲ್ಲಿ ಸರ್ಕಾರದ ಹಿರಿಯ ಮತ್ತು ಕಿರಿಯ ಅಧಿಕಾರಿಗಳೇ ಶಾಮೀಲು ಆಗಿರುವುದರಿಂದ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸುವುದರಿಂದ ನ್ಯಾಯ ಸಿಗುವುದು ಮರೀಚಿಕೆ ಯಾಗಬಹುದು!
ಆದುದರಿಂದ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ನೊಂದ ಮತ್ತು ಸಂತ್ರಸ್ತ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸುವ ಗುರುತರ ಜವಾಬ್ದಾರಿ ನಾಗರೀಕ ಸರ್ಕಾರದ ಮುಖ್ಯಮಂತ್ರಿಯ ಹುದ್ದೆಯಲ್ಲಿರುವ ತಮ್ಮ ಮೇಲಿದೆ. ಆದುದರಿಂದ ತಕ್ಷಣ ಈ ಪ್ರಕರಣವನ್ನು ರಾಜ್ಯ ಸರ್ಕಾರವು ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ತನಿಖೆ ಪೂರ್ಣಗೊಳ್ಳುವವರೆಗೆ ಸರ್ಕಾರದ ಹುದ್ದೆಯಿಂದ ಅವರನ್ನು ಸಸ್ಪೆಂಡ್ ಮಾಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆಯು ತಮ್ಮಲ್ಲಿ ವಿನಯ ಪೂರ್ವಕವಾದ ಆಗ್ರಹವನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.





