ಶಿವಮೊಗ್ಗ, ನೀಟ್ ವಿಚಾರದಲ್ಲಿ ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.ಸುದ್ದಿಗಾರರೊಂದಿಗೆ ಇಲ್ಲಿ ಮಾತನಾಡಿದ ಅವರು, ಅನೇಕ ಯುವಕರಿಗೆ ಕಾರಣವೇ ತಿಳಿಯದೆ ಬಂದಿದ್ದು, ದೇಶದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.
ವಿರೋಧ ಪಕ್ಷಗಳು ಯುವಕರನ್ನು ಮುಂದೆ ಬಿಟ್ಟು ರಾಜಕೀಯ ಮಾಡುತ್ತಿವೆ ಎಂದರು. ಪ್ರಧಾನಿ ಮೋದಿಯವರನ್ನು ದುಷ್ಟ ರಕ್ಷಕ ಎಂದಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ವಿಜಯೇಂದ್ರ, ನೀವು ಸಿಎಂ ಆಗಿದ್ದಾಗ 2.5 ಲಕ್ಷ ಹುದ್ದೆ ಭರ್ತಿಗೆ ಆಗ್ರಹಿಸಿ ಯುವಕರು ಪ್ರತಿಭಟನೆ ಮಾಡಿದಾಗ ನಿಮ್ಮ ಕರುಣೆ ಎಲ್ಲಿಗೆ ಹೋಗಿತ್ತು? ಕಾಲ್ತುಳಿತ ಪ್ರಕರಣದಲ್ಲಿ ರಾತ್ರೋರಾತ್ರಿ ತನಿಖಾ ತಂಡ ರಚಿಸಿ ಅಧಿಕಾರಿಗಳ ಮೇಲೆ ಹಾಕಿ ತಪ್ಪಿಸಿಕೊಳ್ಳಲು ನೋಡಿದ್ದನ್ನು ಜನ ಮರೆತಿಲ್ಲ ಎಂದರು.
ನೀಟ್ ವಿಚಾರದಲ್ಲಿ ತೊಂದರೆಯಾಗಬಾರದಿತ್ತು, ಆದರೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಮರುಪರೀಕ್ಷೆ ನಡೆಸಿದೆ, ಎಲ್ಲವೂ ಸರಿಯಾಗಲಿದೆ ಎಂದರು.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಚಾರವಾಗಿ ಮಾತನಾಡುತ್ತಾ, ಸಿಎಂ ಅವರು ಕನಕಪುರದ ಮುಖ್ಯಮಂತ್ರಿಯಲ್ಲ, ರಾಜ್ಯದ ಮುಖ್ಯಮಂತ್ರಿ. ರಿಯಲ್ ಎಸ್ಟೇಟ್ ಹಿತಾಸಕ್ತಿ ಬದಿಗಿಟ್ಟು 8 ಜಿಲ್ಲೆಗಳಿಗೆ ಅನುಕೂಲವಾಗುವಂತೆ ತುಮಕೂರಿನಲ್ಲಿ ವಿಮಾನ ನಿಲ್ದಾಣ ತೆರೆಯಬೇಕು ಎಂದು ಆಗ್ರಹಿಸಿದರು.
ಇನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಸರ್ಕಾರವೇ ಗೊಂದಲ ಸೃಷ್ಟಿಸಿದ್ದು, ಹೊಸ ಅರ್ಜಿ ಸಲ್ಲಿಕೆಯಲ್ಲಿ 6 ತಿಂಗಳ ಹಣ ನಿಲ್ಲಿಸಿ ಆರ್ಥಿಕ ಸ್ಥಿತಿ ಸುಧಾರಿಸುವ ಭಾವನೆಯಲ್ಲಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಆಗಸ್ಟ್ ತಿಂಗಳ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಜುಲೈ 25, 26 ರಂದು ಬಿಜೆಪಿ SIR ಮಹಾ ಸಂಪರ್ಕ ಅಭಿಯಾನಇದೇ ವೇಳೆ ಎಸ್ ಐ ಆರ್ ಕುರಿತು ಮಾತನಾಡಿದ ವಿಜಯೇಂದ್ರ, ಜುಲೈ 25 ಮತ್ತು 26 ರಂದು ರಾಜ್ಯಾದ್ಯಂತ SIR ಯೋಜನೆ ಬಗ್ಗೆ ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ನೇತೃತ್ವದಲ್ಲಿ 1 ಕೋಟಿ ಮನೆಗಳನ್ನು ತಲುಪುವ ಬೃಹತ್ ಉದ್ದೇಶ ಹೊಂದಲಾಗಿದೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು 20 ಮನೆಗಳಿಗೆ ಭೇಟಿ ನೀಡಿ, SIR ಫಾರಂ ತುಂಬುವುದು ಹೇಗೆ ಎಂಬ ಬಗ್ಗೆ ಜನರಿಗೆ ತಿಳಿಸಿ ಜಾಗೃತಿ ಮೂಡಿಸಲಿದ್ದಾರೆ. SIR ಯೋಜನೆ ಸಂಪೂರ್ಣವಾಗಿ ಯಶಸ್ವಿಯಾಗಲಿ ಎಂಬ ಕಾರಣಕ್ಕೆ ಈ ಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದ ಭೀಕರ ಬರಗಾಲದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೇವಲ ವೀಡಿಯೋ ಕಾನ್ಫರೆನ್ಸ್ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಹೊರತು ಜಿಲ್ಲೆ ಹಾಗೂ ತಾಲೂಕುಗಳಿಗೆ ಭೇಟಿ ನೀಡುತ್ತಿಲ್ಲ.
ಬಿತ್ತನೆ ಮಾಡಿದ ರೈತರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ರೈತರ ಅಹವಾಲು ಕೇಳುತ್ತಿಲ್ಲ. ಸಿಎಂ ದೆಹಲಿಗೆ ಹೋಗಿ ಪ್ರಧಾನಿಗೆ ಪತ್ರ ಬರೆಯುತ್ತಾ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದ್ದಾರೆ. ರಿಯಲ್ ಎಸ್ಟೇಟ್ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ರೈತರ ಸಮಸ್ಯೆಗೆ ತಲೆಕೆಡಿಸಿಕೊಳ್ಳಿ ಎಂದು ಸಿಎಂಗೆ ತಿರುಗೇಟು ನೀಡಿದರು.
