ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದಾಗ ಆರೋಪಿಯೊಬ್ಬ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಯ ಸುಪರ್ದಿಯಿಂದ ಮಾರ್ಗಮಧ್ಯೆ ಪರಾರಿಯಾಗಿರುವ ಘಟನೆ ಹೊಸನಗರ ತಾಲ್ಲೂಕಿನ ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ನಡೆದಿದೆ.ತಾಲ್ಲೂಕಿನ ಅಡುಗೋಡಿ ಗ್ರಾಮದ ವೆಂಕಟೇಶ್ (36) ಪರಾರಿಯಾದ ಆರೋಪಿ.
ಪ್ರಕರಣವೊಂದರ ಸಂಬಂಧ ವೆಂಕಟೇಶನನ್ನು ನ್ಯಾಯಾಲಯದ ವಾರಂಟ್ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿ ಈತನನ್ನು ವಶಕ್ಕೆ ಪಡೆದಿದ್ದರು. ಆರೋಪಿಯನ್ನು ಹೊಸನಗರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ, ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯುವಂತೆ ಆದೇಶಿಸಿದ್ದರು.

ಊಟದ ನೆಪದಲ್ಲಿ ಎಸ್ಕೇಪ್ :
ನ್ಯಾಯಾಲಯದ ಆದೇಶದಂತೆ ಅರಣ್ಯ ಉಪವಲಯ ಅಧಿಕಾರಿಗಳಾದ ಸುನೀಲ್ ಡಿ. ಕುಂಬಾರ್, ಇಬ್ರಾಹಿಂ, ಅರಣ್ಯ ವೀಕ್ಷಕ ಅಯಾನ್ ಬೆಡೆಭಾಯಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ ಚಕ್ರಪಾಣಿ ಅವರು ಇಲಾಖಾ ವಾಹನದಲ್ಲಿ ಆರೋಪಿಯನ್ನು ಶಿವಮೊಗ್ಗಕ್ಕೆ ಕರೆದೊಯ್ಯುತ್ತಿದ್ದರು. ಮಧ್ಯಾಹ್ನ 2 ಗಂಟೆ ಹೊತ್ತಿಗೆ ವಾಹನವು ಬಟ್ಟೆಮಲ್ಲಪ್ಪ ಸರ್ಕಲ್ ಬಳಿ ತಲುಪಿದಾಗ, ತನಗೆ ಹಸಿವಾಗುತ್ತಿದೆ. ಊಟ ಕೊಡಿಸುವಂತೆ ಆರೋಪಿ ವೆಂಕಟೇಶ್ ಸಿಬ್ಬಂದಿಗೆ ತಿಳಿಸಿದ್ದ.
ಸಿಬ್ಬಂದಿಯನ್ನು ದಬ್ಬಿ ಪರಾರಿ:
ಘಟನೆಯ ತಕ್ಷಣ ಸಿಬ್ಬಂದಿ ಬಟ್ಟೆಮಲ್ಲಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸಿದರೂ ಆರೋಪಿ ಪತ್ತೆಯಾಗಿಲ್ಲ.
ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾದ ಆರೋಪಿಯ ಪತ್ತೆಗೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.
