ಶಿವಮೊಗ್ಗ | ಹತ್ತು ವರ್ಷಗಳ ಬಳಿಕವೂ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ವರದಿ ಜಾರಿಗೆ ಬರದೆ ಮೂಲೆಗುಂಪಾಗಿರುವುದು ಸರ್ಕಾರದ ನಿರ್ಲಕ್ಷ್ಯ : ರಘು ಕೌಟಿಲ್ಯ…!

ರಾಜಕೀಯ

ಶಿವಮೊಗ್ಗ,ಜಾತಿ ಜನಗಣತಿ ವಿಷಯದಲ್ಲಿ ರಾಜ್ಯ ಸರ್ಕಾರದ ಬದ್ಧತೆಯ ಕೊರತೆಯಿಂದ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಎಂದು ಬಿಜೆಪಿ ಮುಖಂಡ ರಘು ಕೌಟಿಲ್ಯ ಆರೋಪಿಸಿದರು.

ಇಂದು ಶಿವಮೊಗ್ಗ ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ರಘು ಕೌಟಿಲ್ಯ, ರಾಜ್ಯ ಸರ್ಕಾರ ಜಾತಿ ಜನಗಣತಿ ವಿಚಾರವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿದ್ದು, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

2013ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಜಾತಿ ಜನಗಣತಿ ಕುರಿತು ಹಲವು ಭರವಸೆಗಳನ್ನು ನೀಡಿದರೂ, ಅವು ಕಾರ್ಯರೂಪಕ್ಕೆ ಬಂದಿಲ್ಲ. ಸುಮಾರು ₹600 ಕೋಟಿ ಸಾರ್ವಜನಿಕ ಹಣ ವೆಚ್ಚವಾಗಿದ್ದರೂ, ಅದರ ಸಮರ್ಪಕ ಫಲಿತಾಂಶ ರಾಜ್ಯದ ಜನತೆಗೆ ದೊರಕಿಲ್ಲ ಎಂದು ಆರೋಪಿಸಿದರು.

2014ರಲ್ಲಿ ಕಾಂತರಾಜ ಆಯೋಗಕ್ಕೆ ಜಾತಿ ಜನಗಣತಿಯ ಜವಾಬ್ದಾರಿ ನೀಡಲಾಯಿತು. ನಂತರ ಈ ಜವಾಬ್ದಾರಿಯನ್ನು ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗಕ್ಕೆ ವಹಿಸಲಾಯಿತು. ಆದರೆ ಸುಮಾರು ಹತ್ತು ವರ್ಷಗಳ ಬಳಿಕವೂ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ವರದಿ ಜಾರಿಗೆ ಬರದೆ ಮೂಲೆಗುಂಪಾಗಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಬಿಹಾರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಒಂದು ವರ್ಷದೊಳಗೆ ಜಾತಿ ಸಮೀಕ್ಷೆ ಪೂರ್ಣಗೊಂಡಿದ್ದರೆ, ಕರ್ನಾಟಕದಲ್ಲಿ ದಶಕ ಕಳೆದರೂ ಪ್ರಕ್ರಿಯೆ ಪೂರ್ಣಗೊಳ್ಳದಿರುವುದು ಸರ್ಕಾರದ ಇಚ್ಛಾಶಕ್ತಿಯ ಕೊರತೆಯಾಗಿದೆ ಎಂದು ಆರೋಪಿಸಿದರು.

2025ರ ಜೂನ್ 15ರಂದು ಸಚಿವ ಸಂಪುಟ ಸಭೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಮತ್ತೊಮ್ಮೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ತಂತ್ರಜ್ಞಾನದ ನೆರವಿನಿಂದ ಮೂರೇ ತಿಂಗಳಲ್ಲಿ ವರದಿ ಸಿದ್ಧವಾಗಲಿದೆ ಎಂದು ಘೋಷಿಸಲಾಗಿದ್ದರೂ, ಒಂದು ವರ್ಷ ಕಳೆದರೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ ಎಂದು ಹೇಳಿದರು.

ಸಮೀಕ್ಷೆ ಪೂರ್ಣಗೊಂಡ ಬಳಿಕವೂ ಅದರ ಅನುಷ್ಠಾನಕ್ಕೆ ಸರ್ಕಾರ ಮುಂದಾಗಲಿಲ್ಲ. ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಅಗತ್ಯ ರಾಜಕೀಯ ಇಚ್ಛಾಶಕ್ತಿ ಸರ್ಕಾರದಲ್ಲಿ ಕಾಣಿಸಲಿಲ್ಲ ಎಂದು ಟೀಕಿಸಿದರು.

ಜಾತಿ ಜನಗಣತಿ ಕುರಿತಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿರುವ ಸಂದರ್ಭದಲ್ಲಿ ಸರ್ಕಾರ ಸಮರ್ಪಕ ಕಾನೂನು ಸಿದ್ಧತೆ ಮಾಡಿಕೊಳ್ಳದೆ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಹೊಸ ಮುಖ್ಯಮಂತ್ರಿಗಳು ಸಹ ಈ ವಿಷಯದಲ್ಲಿ ಮೌನ ವಹಿಸಿರುವುದು ವಿಷಾದನೀಯ ಎಂದರು.

ರಾಜ್ಯಪಾಲರ ಭಾಷಣದಲ್ಲಾಗಲಿ, ರಾಜ್ಯ ಬಜೆಟ್ ಭಾಷಣದಲ್ಲಾಗಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಯಾವುದೇ ಉಲ್ಲೇಖ ಇರಲಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆಯಾಗಿದೆ ಎಂದು ಹೇಳಿದರು.ಕರ್ನಾಟಕ ಸರ್ಕಾರ ಜಾತಿ ಜನಗಣತಿಯನ್ನು ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿಕೊಂಡಿದ್ದು, ಸಾಮಾಜಿಕ ನ್ಯಾಯದ ಉದ್ದೇಶದಿಂದ ಕಾರ್ಯನಿರ್ವಹಿಸಿಲ್ಲ. ಕೇಂದ್ರ ಸರ್ಕಾರ ಅಧಿಕೃತವಾಗಿ ಜಾತಿ ಜನಗಣತಿ ಪ್ರಕ್ರಿಯೆ ಆರಂಭಿಸಿರುವ ಹಿನ್ನೆಲೆಯಲ್ಲಿ, ಅದರ ಮೂಲಕವೇ ರಾಜ್ಯದ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಸರ್ಕಾರ ಇದೇ ರೀತಿಯ ನಿರ್ಲಕ್ಷ್ಯ ಮುಂದುವರಿಸಿದರೆ, ರಾಜ್ಯದ ಜನತೆ, ವಿಶೇಷವಾಗಿ ಹಿಂದುಳಿದ ವರ್ಗಗಳ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರಜಾಪ್ರಭುತ್ವದ ಹೋರಾಟದ ಮಾರ್ಗವನ್ನು ಅನುಸರಿಸುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ರಘು ಕೌಟಿಲ್ಯ ಎಚ್ಚರಿಸಿದರು.

Author