ಮಾಧುರ್ಯಭರಿತ ಧ್ವನಿಯಿಂದಲೇ ಅದೆಷ್ಟೋ ಜನರ ಮನಗೆದ್ದಿದ್ದ “ಜಾನಕಿ ಅಮ್ಮ” ಇನ್ನಿಲ್ಲ

ದೇಶ

ಮೈಸೂರು,ತಮ್ಮ ಮಾಧುರ್ಯಭರಿತ ಧ್ವನಿಯಿಂದಲೇ ಚಿತ್ರರಂಗದಲ್ಲಿ ಅದೆಷ್ಟೋ ಜನರ ಮನಗೆದ್ದಿದ್ದ ಗಾಯಕಿ ಎಸ್.ಜಾನಕಿ ಶನಿವಾರ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಹಳ್ಳಿಯ ಸೊಗಡಿನ ಹಾಡುಗಳಿಂದ ಹಿಡಿದು ಎಲ್ಲಾ ಪ್ರಕಾರದ ಗೀತೆಗಳನ್ನೂ ಹಾಡಿದ್ದ ಎಸ್‌.ಜಾನಕಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

“ದಕ್ಷಿಣ ಭಾರತದ ‘ಗಾನಕೋಗಿಲೆ’ ಎಂದೇ ಪ್ರಖ್ಯಾತರಾದ ದಂತಕಥೆ, ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ಈಗ 88 ವರ್ಷ ವಯಸ್ಸಾಗಿತ್ತು. 1938 ಏಪ್ರಿಲ್‌ 23 ರಂದು ಜನಿಸಿದ್ದ ಎಸ್‌. ಜಾನಕಿ, ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಚಿತ್ರರಂಗದಲ್ಲಿ ತಮ್ಮ ಸುಮಧುರ ಕಂಠದ ಮೂಲಕ ಮನೆಮಾತಾಗಿದ್ದರು. ತಮ್ಮ ಸುದೀರ್ಘ ಗಾಯನ ಜೀವನದಲ್ಲಿ ಅವರು. ಬರೋಬ್ಬರಿ 17 ಭಾಷೆಗಳಲ್ಲಿ 48 ಸಾವಿರಕ್ಕೂ ಅಧಿಕ ಅಮರ ಗೀತೆಗಳಿಗೆ ದನಿಯಾಗಿದ್ದರು.

1938ರ ಏಪ್ರಿಲ್ 23 ರಂದು ಜನಿಸಿದ ಸಿಸ್ತ್ಲಾ ಶ್ರೀರಾಮಮೂರ್ತಿ ಜಾನಕಿ (Sistla Sreeramamurthy Janaki) ಅವರು ಕೇವಲ ಗಾಯಕಿಯಾಗಿರಲಿಲ್ಲ, ಬದಲಿಗೆ ಭಾರತೀಯ ಸಂಗೀತ ಇತಿಹಾಸದಲ್ಲೇ ಅತ್ಯಂತ ಪ್ರಭಾವಶಾಲಿ ಧ್ವನಿಯಾಗಿದ್ದರು. ಹಾಡಿನ ಪ್ರತಿ ಸಾಲಿಗೂ ಜೀವ ತುಂಬುತ್ತಿದ್ದ ಇವರ ವಿಶಿಷ್ಟ ಶೈಲಿಗೆ ಜಗತ್ತೇ ಮಾರುಹೋಗಿತ್ತು. ಅದಕ್ಕಾಗಿಯೇ ಇವರನ್ನು ವಿಶ್ವದಾದ್ಯಂತ ಇರುವ ಅಭಿಮಾನಿಗಳು ಪ್ರೀತಿಯಿಂದ “ಜಾನಕಿ ಅಮ್ಮ” ಮತ್ತು “ದಕ್ಷಿಣ ಭಾರತದ ಗಾನಕೋಗಿಲೆ” ಎಂದೇ ಆರಾಧಿಸುತ್ತಿದ್ದರು

ಎಸ್‌.ಜಾನಕಿ ಅವರಿಗೆ ಈವರೆಗೂ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ವಿವಿಧ ರಾಜ್ಯಗಳಿಂದ 33 ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಬಹುಮುಖ ಪ್ರತಿಭೆಯ ಗಾಯಕಿಯಾಗಿ ವ್ಯಾಪಕವಾಗಿ ಅವರು ಮೆಚ್ಚುಗೆ ಪಡೆದಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಗೀತ ನಿರ್ದೇಶಕ ಇಳಯರಾಜ ಅವರೊಂದಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿದ್ದರು. 1960, 1970 ಮತ್ತು 1980 ರ ದಶಕಗಳಲ್ಲಿ ಪಿ.ಬಿ. ಶ್ರೀನಿವಾಸ್ , ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಡಾ. ರಾಜ್‌ಕುಮಾರ್ ಜೊತೆಗೆ ಆಪ್ತ ಒಡನಾಟ ಹೊಂದಿದ್ದರು. ಹೆಚ್ಚೂಕಡಿಮೆ ಡಾ.ರಾಜ್‌ಕುಮಾರ್‌ ಅವರ ಎಲ್ಲಾ ಚಿತ್ರಗಳಲ್ಲೂ ಎಸ್‌.ಜಾನಕಿ ಅವರ ದನಿ ಇರುತ್ತಿತ್ತು. ಇತ್ತೀಚೆಗೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಎಸ್‌.ಜಾನಕಿ, ವೀಲ್‌ಚೇರ್‌ನಲ್ಲಿ ಓಡಾಡುತ್ತಿದ್ದರು.

ಜಾನಕಿ ಅಮ್ಮನವರ ಕಂಠಸಿರಿಗೆ ಭಾಷೆಯ ಗೆರೆಗಳಿರಲಿಲ್ಲ. ಚಿತ್ರಗಳು, ಆಲ್ಬಮ್‌ಗಳು, ದೂರದರ್ಶನ ಮತ್ತು ರೇಡಿಯೋ ಸೇರಿದಂತೆ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಬರೊಬ್ಬರಿ 48,000ಕ್ಕೂ ಹೆಚ್ಚು ಹಾಡುಗಳನ್ನು ಅವರು ರೆಕಾರ್ಡ್ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಸಂಸ್ಕೃತ, ಒಡಿಯಾ, ತುಳು, ಉರ್ದು, ಪಂಜಾಬಿ, ಬಡಗ, ಬೆಂಗಾಲಿ, ಕೊಂಕಣಿ ಸೇರಿದಂತೆ ಭಾರತದ 20 ಭಾಷೆಗಳಲ್ಲಿ ಇವರ ಸ್ವರ ಸಾರಥ್ಯವಿತ್ತು. ಅಷ್ಟೇ ಅಲ್ಲದೆ, ಇಂಗ್ಲಿಷ್, ಜಪಾನೀಸ್, ಜರ್ಮನ್ ಮತ್ತು ಸಿಂಹಳದಂತಹ ವಿದೇಶಿ ಭಾಷೆಗಳಿಗೂ ತಮ್ಮ ಧ್ವನಿಯಾಗುವ ಮೂಲಕ ಭಾರತದ ಅತ್ಯಂತ ಬಹುಮುಖ ಪ್ರತಿಭೆಯ ಗಾಯಕಿ ಎನಿಸಿಕೊಂಡಿದ್ದರು.

ಆಂಧ್ರ ಮೂಲದವರಾಗಿದ್ದರೂ ಜಾನಕಿ ಅಮ್ಮನವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗೀತೆಗಳನ್ನು ಹಾಡಿದ್ದು ನಮ್ಮ ಕನ್ನಡ ಭಾಷೆಯಲ್ಲಿ. ಕನ್ನಡದ ನಂತರದ ಸ್ಥಾನ ಮಲಯಾಳಂ ಭಾಷೆಯದ್ದಾಗಿದೆ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್ ಅವರ ಕಾಲದ ಸುವರ್ಣ ಯುಗದಿಂದ ಹಿಡಿದು ಇತ್ತೀಚಿನ ತಲೆಮಾರಿನವರೆಗೂ ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಾಯಕಿಯ ಧ್ವನಿಯಾಗಿ ಜಾನಕಿ ಅಮ್ಮ ಮಿಂಚಿದ್ದರು.

1957 ರಲ್ಲಿ ತಮಿಳಿನ ‘ವಿಧಿಹಿನ್ ವಿಲಾಯಟ್ಟು’ ಚಿತ್ರದ ಮೂಲಕ ಕೇವಲ 19ನೇ ವಯಸ್ಸಿನಲ್ಲಿಯೇ ಹಿನ್ನೆಲೆ ಗಾಯಕಿಯಾಗಿ ಜಾನಕಿ ಅಮ್ಮ ಚಿತ್ರರಂಗ ಪ್ರವೇಶಿಸಿದರು. ಅಚ್ಚರಿಯೆಂದರೆ, ಅವರು ವೃತ್ತಿಜೀವನ ಆರಂಭಿಸಿದ ಮೊದಲ ವರ್ಷದಲ್ಲೇ ಆರು ವಿಭಿನ್ನ ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದರು. 2016 ರಲ್ಲಿ ಚಿತ್ರರಂಗ ಮತ್ತು ವೇದಿಕೆ ಕಾರ್ಯಕ್ರಮಗಳಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುವವರೆಗೆ ಸತತ 60 ವರ್ಷಗಳ ಕಾಲ ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ತದನಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು 2018 ರ ತಮಿಳಿನ ‘ಪನ್ನಾಡಿ’ ಚಿತ್ರಕ್ಕಾಗಿ ಮತ್ತೊಮ್ಮೆ ಹಾಡಿದ್ದರು.

ಎಸ್. ಜಾನಕಿ ಅವರ ಅಪಾರ ಪ್ರತಿಭೆಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು ಅಸಂಖ್ಯಾತ. 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ವಿವಿಧ ರಾಜ್ಯ ಸರ್ಕಾರಗಳಿಂದ ಬರೋಬ್ಬರಿ 33 ಚಲನಚಿತ್ರ ಪ್ರಶಸ್ತಿಗಳು ಇವರ ಮುಡಿಗೇರಿವೆ. ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ತಮಿಳುನಾಡು ಸರ್ಕಾರದ ‘ಕಲೈಮಾಮಣಿ’ ಮತ್ತು ಕರ್ನಾಟಕ ಸರ್ಕಾರದ ಅತ್ಯುನ್ನತ ‘ರಾಜ್ಯೋತ್ಸವ ಪ್ರಶಸ್ತಿ’ ನೀಡಿ ಇವರನ್ನು ಗೌರವಿಸಲಾಗಿತ್ತು.

1957 ರಲ್ಲಿ ತಮಿಳಿನ ‘ವಿಧಿಹಿನ್ ವಿಲಾಯಟ್ಟು’ ಚಿತ್ರದ ಮೂಲಕ ಕೇವಲ 19ನೇ ವಯಸ್ಸಿನಲ್ಲಿಯೇ ಹಿನ್ನೆಲೆ ಗಾಯಕಿಯಾಗಿ ಜಾನಕಿ ಅಮ್ಮ ಚಿತ್ರರಂಗ ಪ್ರವೇಶಿಸಿದರು. ಅಚ್ಚರಿಯೆಂದರೆ, ಅವರು ವೃತ್ತಿಜೀವನ ಆರಂಭಿಸಿದ ಮೊದಲ ವರ್ಷದಲ್ಲೇ ಆರು ವಿಭಿನ್ನ ಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿದ್ದರು. 2016 ರಲ್ಲಿ ಚಿತ್ರರಂಗ ಮತ್ತು ವೇದಿಕೆ ಕಾರ್ಯಕ್ರಮಗಳಿಂದ ಅಧಿಕೃತವಾಗಿ ನಿವೃತ್ತಿ ಘೋಷಿಸುವವರೆಗೆ ಸತತ 60 ವರ್ಷಗಳ ಕಾಲ ಅವರು ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ತದನಂತರ ಅಭಿಮಾನಿಗಳ ಒತ್ತಾಯಕ್ಕೆ ಮಣಿದು 2018 ರ ತಮಿಳಿನ ‘ಪನ್ನಾಡಿ’ ಚಿತ್ರಕ್ಕಾಗಿ ಮತ್ತೊಮ್ಮೆ ಹಾಡಿದ್ದರು.

2013 ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ವನ್ನು ಜಾನಕಿ ಅಮ್ಮ ನಯವಾಗಿ ತಿರಸ್ಕರಿಸಿದ್ದರು. ಕಲೆಯ ಮೌಲ್ಯ ಮತ್ತು ದಕ್ಷಿಣ ಭಾರತದ ಕಲಾವಿದರನ್ನು ಗುರುತಿಸುವಲ್ಲಿ ಆಗುತ್ತಿರುವ ತಾರತಮ್ಯವನ್ನು ಪ್ರಶ್ನಿಸಿದ್ದ ಅವರು, “ಆರು ದಶಕಗಳ ನನ್ನ ಸಂಗೀತ ಸೇವೆಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಸಿಗಬೇಕೇ ಹೊರತು ಪದ್ಮ ಪ್ರಶಸ್ತಿಗಳಲ್ಲ” ಎಂದು ಹೆಮ್ಮೆಯಿಂದ ಸಾರಿದ ಸ್ವಾಭಿಮಾನಿ ಇವರು. ಇಂದು ಜಾನಕಿ ಅಮ್ಮನವರ ಭೌತಿಕ ಕಾಯ ನಮ್ಮನ್ನು ಅಗಲಿರಬಹುದು. ಆದರೆ, ಅವರು ಹಾಡಿರುವ ಆ 48 ಸಾವಿರಕ್ಕೂ ಹೆಚ್ಚು ಮಧುರ ಗೀತೆಗಳು, ಆ ಕೋಗಿಲೆಯ ಧ್ವನಿ ಜಗತ್ತು ಇರುವವರೆಗೂ ಪ್ರತಿಯೊಬ್ಬ ಸಂಗೀತ ಪ್ರೇಮಿಯ ಎದೆಯಾಳದಲ್ಲಿ ಸದಾ ಜೀವಂತವಾಗಿರುತ್ತದೆ.

Author