ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹುಂಚ ಜೈನ ಮಠದ ಪಕ್ಕದಲ್ಲಿರುವ ಮುತ್ತಿನಕೆರೆ ದಂಡೆಗೆ ರಕ್ಷಣಾ ಬೇಲಿಯನ್ನು ನಿರ್ಮಿಸುವ ಬಗ್ಗೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಂಚ ಅಧಿಕೃತವಾಗಿ ಹೊಂಬುಜ ಎಂದು ಕರೆಯಲ್ಪಡುವ ಅತ್ಯಂತ ಪ್ರಸಿದ್ಧ ಐತಿಹಾಸಿಕ ಜೈನ ಯಾತ್ರಾ ಕೇಂದ್ರವಾಗಿದೆ.

೭ ನೇ ಶತಮಾನದಲ್ಲಿ ಜಿನದತ್ತರಾಯನಿಂದ ಸ್ಥಾಪಿತವಾದ ಈ ಕ್ಷೇತ್ರವು, ದಿಗಂಬರ ಪರಂಪರೆಯ ಪದ್ಮಾವತಿ ದೇವಿಯ ಪ್ರಮುಖ ಮತ್ತು ಪವಿತ್ರವಾದ ಮಠವಾಗಿದೆ. ಶ್ರೀ ಕ್ಷೇತ್ರಕ್ಕೆ ದೇಶದ ವಿವಿಧ ರಾಜ್ಯಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರು, ಕ್ಯಾಬ್, ಟಿಟಿಗಳಲ್ಲಿ ಮತ್ತು ಬಸ್ಸುಗಳಲ್ಲಿ ಬರುತ್ತಾರೆ. ಶ್ರೀ ಕ್ಷೇತ್ರ ಮಠದ ಪಕ್ಕದಲ್ಲಿರುವ ಮುತ್ತಿನ ಕೆರೆ ದಂಡೆಯ ಮೇಲೆ ಹುಂಚ – ಕೊಡೂರು ರಸ್ತೆ ಹಾದುಹೋಗಿದ್ದು ಅತ್ಯಂತ ತೀಕ್ಷ್ಣ ತಿರುವು ಗಳಿಂದ ಕೂಡಿದೆ.ಇಲ್ಲಿಗೆ ಬರುವ ಭಕ್ತಾದಿಗಳು ಕೆರೆಯ ದಂಡೆಯ ತೀಕ್ಷ್ಣವಾದ ತಿರುವುಗಳಲ್ಲಿ ವಾಹನಗಳ ಚಾಲನೆ ಮಾಡುವುದು ಅನಿವಾರ್ಯವಾಗಿದೆ.
ಈ ಕೆರೆ ದಂಡೆಯ ಮೇಲೆ ಚಾಲನೆ ಮಾಡುವಾಗ ತಿರುವಿನಲ್ಲಿ ಅಪಘಾತವಾಗುವ ಸಂಭವವಿದ್ದು, ಈ ಕೆರೆಯ ದಂಡೆಯ ಸುತ್ತ ರಕ್ಷಣಾ ಬೇಲಿಯನ್ನು ತಕ್ಷಣ ನಿರ್ಮಿಸ ಬೇಕಾಗಿದೆ.ಇಲ್ಲಿ ಆಕಸ್ಮಿಕವಾಗಿ ಅಪಘಾತ ಸಂಭವಿಸಿದ್ದಲ್ಲಿ ವಾಹನಗಳು ಕೆರೆಯ ಒಳಗೆ ಬಿದ್ದು ಹಲವಾರು ಭಕ್ತಾದಿಗಳು,ಜನರು ಪ್ರಾಣ ಕಳೆದುಕೊಳ್ಳುವ ಸಂಭವವಿದೆ. ಅಥವಾ ಕೆರೆಯ ಇನ್ನೊಂದು ಬದಿಯಲ್ಲಿ 40 ಅಡಿಗೂ ಹೆಚ್ಚು ಆಳವಾದ ತೋಟವಿದೆ.
ಈ ಎರಡು ಬದಿಯ ಕೆರೆ ದಂಡೆಯ ಮೇಲೆ ವಾಹನಗಳು ಚಾಲನೆ ಮಾಡುವುದು ಒಂದು ರೀತಿಯ ಮೃತ್ಯುವಿನಿಂದ ತಪ್ಪಿಸಿಕೊಂಡು ಹೋಗುವ ಅನುಭವವಾಗುತ್ತದೆ. “ಅತ್ತ ಧರೆ ಇತ್ತಪುಲಿ” ಎಂಬಂತೆ ಒಂದು ಬದಿಯಲ್ಲಿ ಕೆರೆ ಇನ್ನೊಂದು ಬದಿಯಲ್ಲಿ ಆಳವಾದ ಕಣಿವೆ ಇದೆ.

ಆದ್ದರಿಂದ ಮಾನ್ಯ ಗ್ರಾಮೀಣ ಅಭಿವೃದ್ಧಿ ಸಚಿವರಾದ ತಾವು ತಕ್ಷಣ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಈ ಕೆರೆಯ ದಂಡೆಯ 2 ಭಾಗದಲ್ಲಿ ರಕ್ಷಣಾ ಬೇಲಿಯನ್ನು ನಿರ್ಮಿಸಿ ಸಾರ್ವಜನಿಕರ ಪ್ರಾಣವನ್ನು ಉಳಿಸುವುದಲ್ಲದೆ ಮುಂದಿನ ದಿನಗಳಲ್ಲಿ ಅಪಘಾತವಾಗದಂತೆ ತಡೆಯುವಲ್ಲಿ ತಾವು ಮುಖ್ಯಪಾತ್ರ ವಹಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಅಪಘಾತವಾಗಿ ಪ್ರಯಾಣಿಕರು ಸತ್ತು ಹೋಗುವ ಮೊದಲು ಇಲ್ಲಿ ರಕ್ಷಣಾ ಬೇಲಿಯನ್ನು ನಿರ್ಮಿಸುವುದು ನಾಗರೀಕ ಸರ್ಕಾರದ ಕರ್ತವ್ಯವೂ ಕೂಡ ಆಗಿದೆ.ಆದುದರಿಂದ ದಯಮಾಡಿ ತಾವುಗಳು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣ ಈ ಕೆರೆ ದಂಡೆಯ ಮೇಲೆ ಹಾದು ಹೋಗುವ ರಸ್ತೆಯ ಇಕೆಲಗಳಲ್ಲಿ ರಕ್ಷಣಾ ಬೇಲಿಯನ್ನು ನಿರ್ಮಿಸಬೇಕೆಂದು ನೈಜ್ಯ ಹೋರಾಟಗಾರರ ವೇದಿಕೆ ತಮ್ಮಲ್ಲಿ ಮತ್ತೊಮ್ಮೆ ವಿನಯ ಪೂರ್ವಕವಾಗಿ ಆಗ್ರಹ ಪಡಿಸುತ್ತಿದೆ ಎಂದು ನೈಜ್ಯ ಹೋರಾಟಗಾರರ ವೇದಿಕೆ ಪರವಾಗಿ ಹಿರಿಯ ಸಾಮಾಜಿಕ ಹೋರಾಟಗಾರರಾದ ಹೆಚ್ಎಂ ವೆಂಕಟೇಶ್ ಅಗ್ರಹಿಸಿದ್ದಾರೆ.


