ಹೊಸನಗರ | ಅನಾಥೆಗೆ ಸ್ಪಂದಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

ರಾಜಕೀಯ

ಹೊಸನಗರ,ರಿಪ್ಪನ್ ಪೇಟೆ,ಶಶಿಕಲಾ ತನ್ನ ಅಂಗವಿಕಲ ಮಗಳೊಂದಿಗೆ ಕಸ ವಿಲೇವಾರಿ ಘಟಕದಲ್ಲಿ ವಾಸ ಮಾಡುತ್ತಾ ಸರ್ಕಾರದ ಯಾವೊಂದು ಸೌಲಭ್ಯವನ್ನು ಪಡೆಯದೇ ಕಿವಿ ಕೇಳಿಸದ ಸಮಸ್ಯೆಯಿಂದ ಬಳಲುತ್ತಿದ್ದು, ಅವರ ಅಂಗವಿಕಲ ಮಗಳೊಂದಿಗೆ ಸಂಕಷ್ಟದ ಜೀವನ ನಡೆಸುತ್ತಿದ್ದರು.

ಕುಟುಂಬದ ದು:ಸ್ಥಿತಿಯನ್ನು ಬೆಳಕಿಗೆ ತಂದ ವರದಿ ಸಾರ್ವಜನಿಕರ ಗಮನ ಸೆಳೆದಿದ್ದು, ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳು ತಕ್ಷಣ ಸ್ಪಂದಿಸುವಂತೆ ಮಾಡಿತ್ತು.

ಈ ವಿಷಯ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಗಮನಕ್ಕೆ ಬಂದ ತಕ್ಷಣ ಅವರು ನೆರವಿನ ಹಸ್ತ ಚಾಚಿದ್ದು, ಸ್ಥಳೀಯ ಮುಖಂಡ ಚಿದಂಬರಂ ಅವರ ನೇತೃತ್ವದಲ್ಲಿ “ಆಸರೆ ಸಮಿತಿ” ರಚನೆಯಾಯಿತು.

ಮಾರುತಿಪುರ ಹಾಗೂ ಮೇಲಿನಸಂಪಳ್ಳಿ ಗ್ರಾಮಸ್ಥರು, ದಾನಿಗಳು ಮತ್ತು ಸಮಿತಿಯ ಸದಸ್ಯರು ಕೈಜೋಡಿಸಿ ಶಶಿಕಲಾ ಕುಟುಂಬಕ್ಕೆ ಹೊಸ ಮನೆಯನ್ನು ನಿರ್ಮಿಸಿಕೊಡುವ ಕಾರ್ಯ ಆರಂಭಿಸಿದರು.ಈ ನಡುವೆ ಶಶಿಕಲಾ ಅವರಿಗೆ ಕಿವಿಯಂತ್ರ, ರೇಷನ್ ಕಾರ್ಡ್, ಅಂಗವಿಕಲ ಮಗಳಿಗೆ ಆಧಾರ್ ಕಾರ್ಡ್, ತಾತ್ಕಾಲಿಕ ನಿವಾಸಕ್ಕೆ ನೀರು ಮತ್ತು ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿಯೂ ಕ್ರಮ ಕೈಗೊಳ್ಳಲಾಯಿತು.

ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಸಂಪಳ್ಳಿ ಗ್ರಾಮದಲ್ಲಿ ಸುಮಾರು ₹6.5 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಮನೆಯನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸರ್ಕಾರದಿಂದ ₹2 ಲಕ್ಷ ಅನುದಾನ, ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಆರಂಭಿಕ ಹಂತದಲ್ಲಿ ನೀಡಿದ ₹50 ಸಾವಿರ ನೆರವು, ಗ್ರಾಮಸ್ಥರ ದೇಣಿಗೆ ಹಾಗೂ ಆಸರೆ ಸಮಿತಿಯ ಸದಸ್ಯರ ಸಹಕಾರದಿಂದ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಆಸರೆ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ, “ವರದಿಯ ಮೂಲಕ ಕುಟುಂಬದ ದುಸ್ಥಿತಿ ತಿಳಿದುಬಂದ ಬಳಿಕ ಶಾಸಕರ ಗಮನಕ್ಕೆ ತಂದೆವು. ತಕ್ಷಣ ಸ್ಪಂದಿಸಿದ ಅವರು ನೆರವು ನೀಡಿದರು. ಗ್ರಾಮಸ್ಥರ ಸಹಕಾರದಿಂದ ಇಂದು ಈ ಕುಟುಂಬಕ್ಕೆ ಶಾಶ್ವತ ಸೂರು ಕಲ್ಪಿಸಲು ಸಾಧ್ಯವಾಗಿದೆ” ಎಂದು ಹೇಳಿದರು.

ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ, ಆಸರೆ ಸಮಿತಿ ಸದಸ್ಯರಾದ ದೀಪಿಕಾ, ಅವಿನಾಶ್, ಚಿನ್ನಪ್ಪ, ಕೃಷ್ಣಮೂರ್ತಿ, ನಾರಾಯಣಪ್ಪ ಹಾಗೂ ಗ್ರಾಮಸ್ಥರಾದ ರವಿ, ನಾಗರಾಜ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Author