ದೇಶದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರ ಮುಂದಿನ ರಾಜಕೀಯ ನಡೆ ಕೊನೆಗೂ ಸ್ಪಷ್ಟವಾಗುತ್ತಿದೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿದ್ದ ಅಣ್ಣಾಮಲೈ, ಪ್ರಸ್ತುತ ರಾಷ್ಟ್ರೀಯ ನಾಯಕರ ಕಡೆಗಣನೆಯಿಂದ ಬೇಸತ್ತು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಗಳವಾರ (ಜೂನ್ 2) ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿದ ಅಣ್ಣಾಮಲೈ, ತಮ್ಮ 5 ಪುಟಗಳ ಸುದೀರ್ಘ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಈ ಬೆಳವಣಿಗೆಯು ದಕ್ಷಿಣ ಭಾರತದ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ರಾಜೀನಾಮೆ ಸಲ್ಲಿಕೆಯ ಬೆನ್ನಲ್ಲೇ ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ನಾಯಕರು ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ನೀಡಲು ಕೊನೆಯ ಕ್ಷಣದವರೆಗೂ ಮನವೊಲಿಸುವ ಪ್ರಯತ್ನ ನಡೆಸಿದರಾದರೂ, ಅಣ್ಣಾಮಲೈ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದಾರೆ ಎನ್ನಲಾಗಿದೆ.
“ನನ್ನದೇ ಆದ ಸ್ವತಂತ್ರ ರಾಜಕೀಯ ಮಾರ್ಗವನ್ನು ರೂಪಿಸಿಕೊಳ್ಳಲು ಬಯಸುತ್ತೇನೆ” ಎಂದು ಅವರು ಹೈಕಮಾಂಡ್ಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

2020ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಅತ್ಯಂತ ಕಿರಿಯ ವಯಸ್ಸಿಗೆ ತಮಿಳುನಾಡು ಬಿಜೆಪಿ ಸಾರಥ್ಯ ವಹಿಸಿದ್ದ ಅಣ್ಣಾಮಲೈ ಮತ್ತು ಹೈಕಮಾಂಡ್ ನಡುವಿನ ಭಿನ್ನಾಭಿಪ್ರಾಯ ಇತ್ತೀಚಿನ ದಿನಗಳಲ್ಲಿ ತಾರಕಕ್ಕೇರಿತ್ತು. 2026ರ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ಎಐಎಡಿಎಂಕೆ (AIADMK) ಜೊತೆ ಮೈತ್ರಿ ಪುನರುಜ್ಜೀವನಗೊಳಿಸಲು ಹೈಕಮಾಂಡ್ ಬಯಸಿತ್ತು.
ಆದರೆ ಅಣ್ಣಾಮಲೈ ಅವರ ಆಕ್ರಮಣಕಾರಿ ಶೈಲಿ ಹಾಗೂ ಇವಿಆರ್, ಎಂಜಿಆರ್ ಮತ್ತು ಜಯಲಲಿತಾ ಅವರ ಮೇಲಿನ ರಾಜಕೀಯ ಟೀಕೆಗಳು ಮೈತ್ರಿಗೆ ಮುಳುವಾಗಿದ್ದವು. ಈ ಕಾರಣ ನೀಡಿ 2025ರಲ್ಲೇ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಲಾಯಿತು.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಣ್ಣಾಮಲೈ ತಾವು ಸ್ಪರ್ಧಿಸಲು ಇಚ್ಛಿಸಿದ್ದ ಕೊಯಮತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು. ಆದಾಗ್ಯೂ, ಅವರು ಪಕ್ಷದ ಪರವಾಗಿ ರಾಜ್ಯಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದರು.
ಆದರೆ, ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದ್ದು ಅಣ್ಣಾಮಲೈ ಬೆಂಬಲಿಗರನ್ನು ಮತ್ತಷ್ಟು ಕೆರಳಿಸಿತ್ತು. ಅಣ್ಣಾಮಲೈ ಅವರ ಶ್ರಮವನ್ನು ಹೈಕಮಾಂಡ್ ಸರಿಯಾಗಿ ಗುರುತಿಸುತ್ತಿಲ್ಲ ಎಂಬ ಅಸಮಾಧಾನ ಅವರ ಆಪ್ತ ವಲಯದಲ್ಲಿ ತೀವ್ರವಾಗಿತ್ತು.

ಅಣ್ಣಾಮಲೈ ಅವರ ಈ ತೀರ್ಮಾನದ ಹಿಂದೆ ತಮಿಳುನಾಡಿನ ಪ್ರಸ್ತುತ ರಾಜಕೀಯ ಸ್ಥಿತ್ಯಂತರಗಳು ಪ್ರಮುಖ ಪಾತ್ರ ವಹಿಸಿವೆ. ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ಅವರು ಸಿನಿಮಾ ರಂಗ ತ್ಯಜಿಸಿ “ತಮಿಳಗ ವೆಟ್ರಿ ಕಳಗಂ” (TVK) ಪಕ್ಷ ಸ್ಥಾಪಿಸಿ ಯಶಸ್ವಿಯಾಗಿ ಉದಯಿಸಿರುವುದು ಅಣ್ಣಾಮಲೈ ಅವರ ಯೋಚನೆಯನ್ನು ಬದಲಿಸಿದೆ.
ಬಿಜೆಪಿಯಿಂದ ಹೊರಬರಲಿರುವ ಅಣ್ಣಾಮಲೈ ಮುಂದೇನು ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಜೂನ್ 4 ರಂದು ಉತ್ತರ ಸಿಗುವ ಸಾಧ್ಯತೆ ಇದೆ. ಅಂದು ಅಣ್ಣಾಮಲೈ ಅವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲೇ ಅವರು ತಮ್ಮ ಸ್ವಂತ ಪ್ರಾದೇಶಿಕ ಪಕ್ಷ ಅಥವಾ ಜನಾಂದೋಲನ ವೇದಿಕೆಯನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ.

