ತರೀಕೆರೆ | ಯುವ ಸಮಿತಿ ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಸಂಯುಕ್ತ ಆಶ್ರಯದಲ್ಲಿ “ಉತ್ತಮ ಸಮಾಜಕ್ಕಾಗಿ ಸಬಲ ಯುವಜನತೆ” ಸಮಾವೇಶ

ಚಿಕ್ಕಮಗಳೂರು

ತರೀಕೆರೆ ಯುವ ಸಮಿತಿ ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ತರೀಕೆರೆ ಘಟಕದ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ “ಉತ್ತಮ ಸಮಾಜಕ್ಕಾಗಿ ಸಬಲ ಯುವಜನತೆ” ಎಂಬ ವಿಷಯದಡಿ ಚಿಕ್ಕಮಗಳೂರು ಜಿಲ್ಲಾ ಯುವ ಸಮಾವೇಶ ಯಶಸ್ವಿಯಾಗಿ ನಡೆಯಿತು.

ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಯುವಜನ ಒಕ್ಕೂಟದ ಅಧ್ಯಕ್ಷರಾದ ಮಸೀಹುಝ್ಝಮಾ ಅನ್ಸಾರಿ, JIH ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ. ಸಾದ್ ಬೆಳಗಾಮಿ, ತರೀಕೆರೆಯ ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಮಲ್ಲಂಗಿ ಹಾಗೂ SYM ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ನಸೀಮ್ ಅಹ್ಮದ್ ಭಾಗವಹಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಮಸೀಹುಝ್ಝಮಾ ಅನ್ಸಾರಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಸಮಸ್ಯೆಯನ್ನು ಅಂಕಿಅಂಶಗಳೊಂದಿಗೆ ವಿವರಿಸಿ ಆತಂಕ ವ್ಯಕ್ತಪಡಿಸಿದರು. ಯುವಜನತೆ ಮಾದಕ ವ್ಯಸನದ ಬಲೆಗೆ ಸಿಲುಕುತ್ತಿರುವುದು ಸಮಾಜಕ್ಕೆ ದೊಡ್ಡ ಸವಾಲಾಗಿದ್ದು, ಇದರ ವಿರುದ್ಧ ಸಮಗ್ರ ಜಾಗೃತಿ ಅಗತ್ಯವಿದೆ ಎಂದು ತಿಳಿಸಿದರು.

ಮಂಜುನಾಥ್ ಮಲ್ಲಂಗಿ ಅವರು ಮಾತನಾಡಿ, ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಮಕ್ಕಳು ಪೋಷಕರನ್ನೇ ಅನುಕರಿಸುವುದರಿಂದ ಕುಟುಂಬದಲ್ಲಿ ನೈತಿಕ ಮೌಲ್ಯಗಳು ಬಲವಾಗಿರಬೇಕು ಎಂದು ಹೇಳಿದರು. ಮಾದಕ ಪದಾರ್ಥಗಳ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವಜನತೆ ಮಾದಕ ವ್ಯಸನ, ಆನ್‌ಲೈನ್ ಗೇಮ್ ಹಾಗೂ ಆನ್‌ಲೈನ್ ಜೂಜಿನಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು.

ಕಳೆದ ಒಂದು ವಾರದಿಂದ ಮಾದಕ ವ್ಯಸನ ಮತ್ತು ಜೂಜಿನ ವಿರುದ್ಧ ಜಾಗೃತಿ ಅಭಿಯಾನ ನಡೆಸಿ ಯುವ ಸಮಾವೇಶ ಆಯೋಜಿಸಿರುವ ತರೀಕೆರೆ ಯುವ ಸಮಿತಿ ಹಾಗೂ ಸೋಲಿಡಾರಿಟಿ ತಂಡದ ಕಾರ್ಯವನ್ನು ಅಭಿನಂದಿಸಿದರು.

ಹಿರಿಯ ವೈದ್ಯರು ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ಮೇಲ್ವಿಚಾರಕರಾದ ಡಾ. ಸಾದ್ ಬೆಳಗಾಮಿ ಅವರು, ಇಂತಹ ಜಾಗೃತಿ ಅಭಿಯಾನಗಳು ಇಂದಿನ ಕಾಲದ ಅಗತ್ಯವಾಗಿದೆ ಎಂದು ಹೇಳಿದರು. ಪವಿತ್ರ ಕುರ್‌ಆನ್ ಮಾನವನನ್ನು ನೈತಿಕ ಕುಸಿತಕ್ಕೆ ದೂಡುವ ಕೆಡುಕುಗಳಿಂದ ದೂರವಿರಲು ಸೂಚಿಸುತ್ತಿದೆ ಎಂದು ಉಲ್ಲೇಖಿಸಿದರು.

ಮಾದಕ ವ್ಯಸನದಿಂದ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಯುವಜನತೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿ ಆತ್ಮಹತ್ಯೆಗಳಂತಹ ದುರಂತಗಳಿಗೆ ತುತ್ತಾಗುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದರು.ಅಧ್ಯಕ್ಷೀಯ ಭಾಷಣ ಮಾಡಿದ ಡಾ. ನಸೀಮ್ ಅಹ್ಮದ್ ಅವರು, ಯುವಜನತೆ ದುಶ್ಚಟಗಳಿಂದ ದೂರವಿದ್ದು ನೈತಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಕರೆ ನೀಡಿದರು. ಧರ್ಮ, ಜಾತಿ ಭೇದವಿಲ್ಲದೆ ಸಮಾಜದ ಪ್ರತಿಯೊಬ್ಬ ಯುವಕನನ್ನೂ ಇಂತಹ ಕೆಡುಕುಗಳಿಂದ ರಕ್ಷಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದರು.

ಯುವಜನತೆ ದೇಶದ ಅಮೂಲ್ಯ ಆಸ್ತಿಯಾಗಿದ್ದು, ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವುದು ಅತ್ಯಗತ್ಯ ಎಂದು ಹೇಳಿದರು.ಪ್ರವಾದಿ ಮುಹಮ್ಮದ್ (ಸ) ಅವರು ತಮ್ಮ ಯೌವನದಲ್ಲಿ “ಹಿಲ್ಫುಲ್ ಫಝೂಲ್” ಎಂಬ ಒಡಂಬಡಿಕೆಯ ಮೂಲಕ ವಿವಿಧ ಸಮುದಾಯದ ಜನರನ್ನು ಒಗ್ಗೂಡಿಸಿ ಅನ್ಯಾಯದ ವಿರುದ್ಧ ಹೋರಾಡಿದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಇಂದಿನ ಎಲ್ಲಾ ಯುವ ಸಂಘಟನೆಗಳೂ ಸಮಾಜದ ಕೆಡುಕುಗಳ ವಿರುದ್ಧ ಒಗ್ಗೂಡಿ ಹೋರಾಡಬೇಕು ಎಂದು ಹೇಳಿದರು.

ಸಮಾವೇಶವನ್ನು ಯಶಸ್ವಿಯಾಗಿ ಆಯೋಜಿಸಿದ ತರೀಕೆರೆ ಯುವ ಸಮಿತಿ ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ತರೀಕೆರೆ ಘಟಕಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ಹಂತವಾಗಿ ಯುವಜನರನ್ನು ಮಾದಕ ವ್ಯಸನದಿಂದ ರಕ್ಷಿಸುವ ಉದ್ದೇಶದಿಂದ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ಪ್ರಕಟಿಸಲಾದ “ಡಿಜಿಟಲ್ ಸ್ವಾತಂತ್ರ್ಯ” ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

Author