ನವದೆಹಲಿ, ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮಾದರಿಯಲ್ಲಿ ನೀಟ್ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೆಂದ್ರ ಪ್ರಧಾನ್ ತಿಳಿಸಿದ್ದಾರೆ.
ರದ್ದುಗೊಂಡಿದ್ದ ನೀಟ್ – ಯುಜಿ ಮರು ಪರೀಕ್ಷೆಯನ್ನು ಜೂನ್ 21ರಂದು ನಡೆಸಲಾಗುವುದು. ಪ್ರವೇಶ ಪತ್ರವನ್ನು ಜೂನ್ 14ರಂದು ವಿತರಿಸಲಾಗುವುದು ಎಂದು ಇದೇ ವೇಳೆ ಅವರು ಮಾಹಿತಿ ನೀಡಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ ಮುಂದಿನ ವರ್ಷದಿಂದ ಪರೀಕ್ಷೆಯಲ್ಲಿ ಕಠಿಣ ಕ್ರಮ ಅನುಸರಿಸಲು ಪರೀಕ್ಷಾ ಮಾದರಿ ಬದಲಾವಣೆ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಪರೀಕ್ಷೆಯ ಮೂಲ ಅಂಶದ ಕುರಿತು ನಾನು ಸ್ಪಷ್ಟನೆ ನೀಡಲು ಬಯಸುತ್ತೇನೆ. ಮುಂದಿನ ವರ್ಷದಿಂದ ಒಎಂಆರ್ ಬದಲಾಗಿ, ಕಂಪ್ಯೂಟರ್ ಆಧಾರಿತ ಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಅವರ ಭವಿಷ್ಯವೇ ನಮ್ಮ ಪ್ರಮುಖ ಆದ್ಯತೆಯಾಗಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ಪ್ರಯತ್ನದ ಕುರಿತು ಸರ್ಕಾರ ಯಾವಾಗಲೂ ಸೂಕ್ಷ್ಮವವಾಗಿ ಕಾರ್ಯ ನಿರ್ವಹಿಸಿದೆ ಎಂದರು.
ಮೇ 3ರಂದು ದೇಶಾದ್ಯಂತ ನಡೆದಿದ್ದ ವೈದ್ಯಕೀಯ ಪ್ರವೇಶದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಹಿನ್ನೆಲೆ ಈ ಪರೀಕ್ಷೆಯನ್ನು ಎನ್ಟಿಎ ರದ್ದು ಮಾಡಿತ್ತು.
ಜೂನ್ 21ರಂದು ನಡೆಯಲಿರುವ ನೀಟ್ ಮರು ಪರೀಕ್ಷೆ ಒಎಂಆರ್ ಮಾದರಿಯಲ್ಲಿಯೇ ನಡೆಯಲಿದ್ದು, ಮುಂದಿನ ವರ್ಷದಿಂದ ಹೊಸ ಮಾದರಿ ಕಂಪ್ಯೂಟರ್ ಆಧಾರಿತ ಅಳವಡಿಕೆ ಮಾಡಿಕೊಳ್ಳಲಾಗುವುದು. ನ್ಯಾಯಯುತ ಮತ್ತು ದೋಷಮುಕ್ತವಾಗಿ ಪರೀಕ್ಷೆ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

