ಶಿವಮೊಗ್ಗ,ಮಕ್ಕಳ ಅಗಲಿಕೆಯಿಂದ ಮನನೊಂದು, ಮದ್ಯದ ಅಮಲಿನಲ್ಲಿ ಸಖಿ ಕೇಂದ್ರದ ಮುಂದೆ ಗದ್ದಲ ಸೃಷ್ಟಿಸುತ್ತಿದ್ದ ಮಹಿಳೆಯನ್ನು ಸಮಾಧಾನಪಡಿಸಿದ ಅಕ್ಕ ಪಡೆಯು ಆಕೆಯನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದೆ.
ದಂಪತಿಗಳಿಬ್ಬರೂ ಮಕ್ಕಳ ಸರಿಯಾದ ಆರೈಕೆ ಮಾಡದ ಹಿನ್ನೆಲೆಯಲ್ಲಿ, ಮಕ್ಕಳ ಹಿತದೃಷ್ಟಿಯಿಂದ ಅವರನ್ನು ಇತ್ತೀಚೆಗಷ್ಟೇ ರಕ್ಷಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು.
ಮಕ್ಕಳನ್ನು ನೋಡಬೇಕೆಂಬ ಹಂಬಲದಿಂದ ಹಾಗೂ ಅವರ ವಿರಹದಿಂದ ನೊಂದಿದ್ದ ತಾಯಿ, ಮದ್ಯಪಾನ ಮಾಡಿ ಸಖಿ ಕೇಂದ್ರದ ಬಳಿ ಬಂದು ಉಪಟಳ ನೀಡುತ್ತಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಕ್ಕ ಪಡೆಯ ಸಿಬ್ಬಂದಿ, ಪರಿಸ್ಥಿತಿಯನ್ನು ಅತ್ಯಂತ ಸಂಯಮದಿಂದ ನಿಭಾಯಿಸಿದರು. ಮಹಿಳೆಯ ಸ್ಥಿತಿಯನ್ನು ಕಂಡು ಆಕೆಗೆ ಸಾಂತ್ವನ ಹೇಳಿದ ಪೊಲೀಸರು, ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸು, ನಿನ್ನ ಜೀವನವನ್ನು ಸರಿಪಡಿಸಿಕೊ ಎಂದು ಹಿತವಚನ ನೀಡಿದರು. ಬಳಿಕ ಮಹಿಳೆಯ ವಿಳಾಸವನ್ನು ಪಡೆದು ಅವಳ ಮನೆಗೆ ತಲುಪಿಸಿದರು.

