ಇಂಧನ ಬಳಕೆ ಕಡಿಮೆಗೆ ಪ್ರಧಾನಿ ಸಲಹೆ : ಡಿಸಿಎಂ ಡಿಕೆಶಿ ತಿರುಗೇಟು

ರಾಜಕೀಯ

ಬೆಂಗಳೂರು, ಅಮೆರಿಕಾ- ಇರಾನ್ ಯುದ್ಧದ ಹಿನ್ನೆಲೆಯಲ್ಲಿ ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಬಿಜೆಪಿ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರಿಂದ ತ್ಯಾಗ ಪ್ರಾರಂಭವಾಗಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.

ಈ ಕುರಿತಾಗಿ ಸೋಮವಾರ ಮಾತನಾಡಿ, ಪ್ರಧಾನ ಮಂತ್ರಿಗಳು, ಇವುಗಳ ಬೆಲೆ ಏರಿಕೆಯಾಗಿದ್ದು ಯಾಕೆ? ಯಾರಿಂದ ಬೆಲೆ ಏರಿಕೆಯಾಗಿದೆ ಎಂಬುದನ್ನು ವಿವರಿಸಬೇಕು ಎಂದು ಆಗ್ರಹಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದ ಜನರಿಗೆ ಕೊಟ್ಟಿರುವ ಸಲಹೆ ಬಗ್ಗೆ ಕೇಳಿದಾಗ, ‘ಮದುವೆ, ಮುಂಜಿ ಮಾಡುವವರು ಚಿನ್ನ ತೆಗೆದುಕೊಳ್ಳಬೇಡಿ ಎಂದು ಹೇಳಲು ಸಾಧ್ಯವೇ? ಅವರು ಸಲಹೆಗಳನ್ನು ನೀಡುತ್ತಾರೆ.

ಹಿಂದೆ ಕೋವಿಡ್ ಬಂದಾಗ ದೀಪ ಹಚ್ಚಿಸಿ, ಚಪ್ಪಾಳೆ ತಟ್ಟಿಸಿದರು. ಅದರಿಂದ ಸಮಸ್ಯೆ ನಿಂತು ಹೋಯಿತಾ?’ ಎಂದು ಪ್ರಶ್ನಿಸಿದರು.ಮದುವೆಯಾದ ಮಹಿಳೆ ಚಿನ್ನದ ತಾಳಿ, ಸರ ಹಾಕಿಕೊಳ್ಳುವುದುನ್ನು ಬೇಡ ಎನ್ನಲು ಸಾಧ್ಯವೇ? ಅವರ ಬದುಕಿನಲ್ಲಿ ಕಷ್ಟವೋ ಸುಖವೋ, ಸಾಲ ಮಾಡಿ ಚಿನ್ನ ಖರೀದಿ ಮಾಡುತ್ತಾರೆ. ಎಲ್ಲರನ್ನು ಸಾರ್ವಜನಿಕ ಸಾರಿಗೆಯಲ್ಲೇ ಓಡಾಡಿ ಎನ್ನುವುದಾದರೆ, ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳು ಸಾರ್ವಜನಿಕ ಸಾರಿಗೆಯಲ್ಲಿ ಓಡಾಡುವಂತೆ ಸೂಚಿಸಲಿ.

ಅವರ ಕೇಂದ್ರ ಸಚಿವರಿಗೆ ತಾಕೀತು ಮಾಡಲಿ. ನಾವು ಮೊದಲು ನಡೆದುಕೊಂಡು ನಂತರ ಸಾಮಾನ್ಯ ಜನಕ್ಕೆ ಸಂದೇಶ ನೀಡಬೇಕು ಎಂದು ತಿರುಗೇಟು ನೀಡಿದರು.

ಬಿಜೆಪಿ ಶಾಸಕರು, ನಾಯಕರು, ಕಾರ್ಯಕರ್ತರಿಂದ ತ್ಯಾಗ ಪ್ರಾರಂಭವಾಗಲಿಜಗತ್ತಿನ ಪರಿಸ್ಥಿತಿ ಸರಿಯಿಲ್ಲ ಕೆಲವೊಮ್ಮೆ ತ್ಯಾಗಕ್ಕೂ ಸಿದ್ಧವಾಗಿರಬೇಕು ಎಂಬ ಕಾರಣಕ್ಕೆ ಸಂದೇಶ ನೀಡಿದ್ದಾರೆ ಎಂದಾಗ, “ಮೊದಲು ತ್ಯಾಗವನ್ನು ಮಂತ್ರಿಗಳು, ಕೇಂದ್ರ ಸರ್ಕಾರದ ಸಚಿವರು, ಅಧಿಕಾರಿಗಳು, ಬಿಜೆಪಿ ಆಡಳಿತ ರಾಜ್ಯಗಳಲ್ಲಿರುವ ಅಧಿಕಾರಿಗಳಿಂದ, ಅವರ ಪಕ್ಷದ ಶಾಸಕರು, ನಾಯಕರು ಹಾಗೂ ಕಾರ್ಯಕರ್ತರಿಂದ ತ್ಯಾಗ ಆರಂಭವಾಗಲಿ. ನಂತರ ಬೇರೆಯವರಿಗೆ ತ್ಯಾಗದ ಸಲಹೆ ನೀಡಲಿ” ಎಂದು ತಿರುಗೇಟು ನೀಡಿದರು.

Author