ಹೃದಯ ಸ್ಥಂಭನ: ಚಲಿಸುವಾಗಲೇ ಬಸ್ ಚಾಲಕ ಸಾವು

ಅವಘಡ ದುರಂತ

ಶಿವಮೊಗ್ಗ : ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿ ಸಾವು

ಸಾಗರ,ತ್ಯಾಗರ್ತಿಯ ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಮರಾಠಿ ಸುರೇಶ್ (49) ಎಂಬುವರು ಆಕಸ್ಮಿಕವಾಗಿ ವಿದ್ಯುತ್ ತಗುಲಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಅಡಿಕೆ ತೋಟಕ್ಕೆ ಕೊಳವೆಬಾವಿಮೂಲಕ ಪ್ರತಿದಿನ ನೀರುಹಾಯಿಸುತ್ತಿದ್ದರು. ಎಂದಿನಂತೆ ಶುಕ್ರವಾರ ಬೆಳಿಗ್ಗೆ 6.30ರ ವೇಳೆಗೆ ನೀರು ಹಾಯಿಸಲು ಹೋದಾಗ ಕೊಳವೆ ಬಾವಿಗೆ ಎಳೆದಿರುವ ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದನ್ನು ಗಮನಿಸಿಲ್ಲ. ಅದನ್ನು ತುಳಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ

ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿಯಾಗಿ ಚಿರತೆ ಸಾವು

ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ಇಂದು ಮಧ್ಯಾಹ್ನ ಬೈಕ್ ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಶಿವಮೊಗ್ಗ ಮಾರ್ಗದಿಂದ ತೀರ್ಥಹಳ್ಳಿ ಕಡೆಗೆ ಬೈಕ್ ಸವಾರ ಚಲಿಸುತ್ತಿದ್ದಾಗ, ಮಂಡಗದ್ದೆ ಸಮೀಪದ ಅರಣ್ಯ ಭಾಗದಿಂದ ಚಿರತೆಯು ಹಠಾತ್ತನೆ ರಸ್ತೆ ದಾಟಲು ಅಡ್ಡ ಬಂದಿದೆ.

ಈ ವೇಳೆ ಸವಾರನಿಗೆ ಬೈಕ್ ನಿಯಂತ್ರಿಸಲು ಸಾಧ್ಯವಾಗದೆ ಚಿರತೆಗೆ ಡಿಕ್ಕಿ ಹೊಡೆದಿದ್ದಾನೆ.‘ಡಿಕ್ಕಿಯ ರಭಸಕ್ಕೆ ಚಿರತೆಯು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ.

ಇದರ ಪರಿಣಾಮ ಬೈಕ್ ಸಮೇತ ಕೆಳಗೆ ಬಿದ್ದ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗಾಜನೂರು ಆರ್​ ಎಫ್​ ಓ ವಿನಯ್​ ಕುಮಾರ್​ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ; ಪ್ರಯಾಣಿಕರಿಗೆ ಗಾಯ

ಹೊಸನಗರ,ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿ 766 ಸಿ ಜಯನಗರದ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಇಂದು ಮುಂಜಾನೆ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಬೆಂಗಳೂರಿನಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸಾಗರ್ ಹೆಸರಿನ ಖಾಸಗಿ ಬಸ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ.ಇಂದು ಬೆಳಿಗ್ಗೆ ಸುಮಾರು 5:15ರ ಸಮಯದಲ್ಲಿ ಈ ಘಟನೆ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆಯ ಎಡಭಾಗಕ್ಕೆ ಮಗುಚಿ ಬಿದ್ದಿದೆ. ಬಸ್‌ನಲ್ಲಿದ್ದ ಒಟ್ಟು 11 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಧಾವಿಸಿದ ಪೊಲೀಸರುಪ್ರಯಾಣಿಕರಿಗೆ ಆದ ಸಣ್ಣಪುಟ್ಟ ಗಾಯಗಳನ್ನು ಗಮನಿಸಿ , ತಕ್ಷಣವೇ ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದರು.

ಹೃದಯ ಸ್ಥಂಭನ: ಚಲಿಸುವಾಗಲೇ ಬಸ್ ಚಾಲಕ ಸಾವು

ಮಡಿಕೇರಿ, ಬೆಂಗಳೂರಿನಿಂದ ಕುಕ್ಕೆಸುಬ್ರಹ್ಮಣ್ಯಕ್ಕೆ ಹೊರಟಿದ್ದ ಖಾಸಗಿ ಬಸ್ ಚಾಲಕ ಶಿವಕುಮಾರಸ್ವಾಮಿ (52) ಅವರು ಬಸ್ ಚಾಲನೆ ಮಾಡುತ್ತಿದ್ದಾಗಲೇ ಹೃದಯಸ್ತಂಭನಕ್ಕೆ ಒಳಗಾಗಿ ಇಲಿಗೆ ಸಮೀಪದ ತಾಳತ್ತಮನೆ ಎಂಬಲ್ಲಿ ಮೃತಪಟ್ಟರು.

ಬಸ್‌ ಪಕ್ಕದ ಮಣ್ಣಿನ ದಿಬ್ಬಕ್ಕೆ ಒರಗಿ ನಿಂತಿದೆ.ಅವರು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನವರು. ‘ಮುಂಜಾನೆ 4.45ಕ್ಕೆ ತಾಳತ್ತಮನೆ ಸಮೀಪ ಅವರಿಗೆ ಹೃದಯಸ್ತಂಭನವಾಯಿತು. ಬಸ್‌ನಲ್ಲಿದ್ದ ಇಬ್ಬರು ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರೂ ಬದುಕುಳಿಯಲಿಲ್ಲ.

ಹೃದಯಸ್ತಂಭನಕ್ಕೆ ಒಳಗಾಗುತ್ತಿದ್ದಂತೆ ಅವರುಬಸ್‌ನ ವೇಗವನ್ನು ಕಡಿಮೆಮಾಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

Author