ಕೇರಳಂ | ಕಾಂಗ್ರೆಸ್‌ನಲ್ಲಿ ವೇಣುಗೋಪಾಲ್ ಹೆಸರು ಮುಂಚೂಣಿ

ರಾಜಕೀಯ

ಕೆ.ಸಿ. ವೇಣುಗೋಪಾಲ್ ಅವರು ಕೇರಳದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಗಟ್ಟಿಯಾಗುತ್ತಿವೆ. ಕಾಂಗ್ರೆಸ್ ಹೈಕಮಾಂಡ್‌ಗೆ ಸಲ್ಲಿಕೆಯಾಗಿರುವ ವರದಿಯಲ್ಲಿ ಅವರ ಹೆಸರಿಗೆ ಹೆಚ್ಚಿನ ಒಲವು ವ್ಯಕ್ತವಾಗಿದ್ದು, ಯುಡಿಎಫ್ ಸರ್ಕಾರ ರಚನೆಗೆ ಸಜ್ಜಾಗಿದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಹೊರಬಿದ್ದಿದೆ.

ಹಿರಿಯ ವೀಕ್ಷಕರಾದ ಅಜಯ್ ಮಾಕೆನ್ ಹಾಗೂ ಮುಕುಲ್ ವಾಸ್ನಿಕ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ವೇಣುಗೋಪಾಲ್ ಅವರ ಹೆಸರೇ ಪ್ರಮುಖವಾಗಿ ಉಲ್ಲೇಖಗೊಂಡಿದೆ ಎನ್ನಲಾಗಿದೆ.

ಮುಖ್ಯಮಂತ್ರಿ ಹುದ್ದೆಗೆ ವಿ.ಡಿ. ಸತೀಶನ್ ಹಾಗೂ ರಮೇಶ್ ಚೆನ್ನಿತ್ತಲ ಅವರ ಹೆಸರುಗಳೂ ಕೇಳಿಬಂದಿದ್ದರೂ, ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವೇಣುಗೋಪಾಲ್ ಅವರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ.

63 ವರ್ಷದ ವೇಣುಗೋಪಾಲ್ ಅವರು ಪ್ರಸ್ತುತ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದು, ಆಲಪ್ಪುಳ ಕ್ಷೇತ್ರದ ಸಂಸದರಾಗಿದ್ದಾರೆ. ಯುಡಿಎಫ್ ಭರ್ಜರಿ ಗೆಲುವಿನ ಹಿಂದೆ ಅವರ ತಂತ್ರಗಾರಿಕೆ ಪ್ರಮುಖ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಣ್ಣಿಸುತ್ತಿದ್ದಾರೆ.

ಪಕ್ಷ ಕಚೇರಿಗಳ ಮುಂದೆ “ನಾಯಕ”, “ಹೀರೋ” ಎಂಬ ಪೋಸ್ಟರ್‌ಗಳು ಕೂಡ ಕಾಣಿಸಿಕೊಳ್ಳುತ್ತಿವೆ.ಮುಂದಿನ ಸೋಮವಾರ ಪ್ರಮಾಣವಚನ ಸಮಾರಂಭ ನಡೆಯುವ ಸಾಧ್ಯತೆ ಇದ್ದು, ರಾಹುಲ್ ಗಾಂಧಿ ಭಾಗವಹಿಸುವ ನಿರೀಕ್ಷೆಯಿದೆ.

ಇದೇ ವೇಳೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ನಡುವೆಯೂ ವಿಜಯ್ ಹಾಗೂ ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಆಹ್ವಾನ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕೇರಳದ 140 ಸದಸ್ಯರ ವಿಧಾನಸಭೆಯಲ್ಲಿ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದೆ. ಕಾಂಗ್ರೆಸ್ 63 ಸ್ಥಾನಗಳಲ್ಲಿ ಜಯಗಳಿಸಿದ್ದು, ಐಯುಎಂಎಲ್ 22, ಕೇರಳ ಕಾಂಗ್ರೆಸ್ 7 ಹಾಗೂ ಇತರೆ ಮಿತ್ರಪಕ್ಷಗಳು 10 ಸ್ಥಾನಗಳನ್ನು ಪಡೆದಿವೆ.

ಎಲ್‌ಡಿಎಫ್ ಕೇವಲ 35 ಸ್ಥಾನಗಳಿಗೆ ಕುಸಿದಿದೆ.ಇದೇ ವೇಳೆ ತಮಿಳುನಾಡು ರಾಜಕೀಯದಲ್ಲೂ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಕಾಂಗ್ರೆಸ್ ಡಿಎಂಕೆ ಮೈತ್ರಿಯಿಂದ ದೂರ ಸರಿದು ತಮಿಳಗ ವೆಟ್ರಿ ಕಳಗಂ (TVK) ಜೊತೆ ಚುನಾವಣೋತ್ತರ ಮೈತ್ರಿಗೆ ಮುಂದಾಗಿದೆ ಎಂಬ ಚರ್ಚೆಗಳು ಜೋರಾಗಿವೆ.

Author