ಶಿವಮೊಗ್ಗ | ಜಿಮ್ ಟ್ರೇನರ್ ಗೆ ರಾಡ್ ನಿಂದ ಹಲ್ಲೆ : ಪ್ರಕರಣ ದಾಖಲು

ಕ್ರೈಂ

ಶಿವಮೊಗ್ಗ, ನಗರದ ವಿನಾಯಕ ನಗರದ ಜಿಮ್ ಟ್ರೈನರ್ ಒಬ್ಬರ ಮೇಲೆ ಅನಾಮಧೇಯ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ವಿನೋಬಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಟ್ರೈನರ್ ರಾತ್ರಿ 9.10ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳಲು ಜಿಮ್‌ನಿಂದ ಹೊರಬಂದಿದ್ದರು. ಫುಟ್‌ಪಾತ್‌ನಲ್ಲಿ ನಿಲ್ಲಿಸಿದ್ದ ತಮ್ಮ ಬೈಕ್ ಹತ್ತಲು ರೆಡಿಯಾದಾಗ , ಸುಮಾರು 25 ರಿಂದ 30 ವರ್ಷ ವಯಸ್ಸಿನ ಅನಾಮಧೇಯ ವ್ಯಕ್ತಿಯೊಬ್ಬ ಏಕಾಏಕಿ ಪ್ರತ್ಯಕ್ಷನಾಗಿದ್ದಾನೆ. ಅಷ್ಟೇ ಅಲ್ಲದೆ ಟ್ರೈನರ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ , ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ದುಷ್ಕರ್ಮಿ, ತನ್ನ ಬಳಿಯಿದ್ದ ಕಬ್ಬಿಣದ ರಾಡ್‌ನಿಂದ ಟ್ರೈನರ್ ಅವರ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆ ನಡೆಸಿದ ನಂತರ ದುಷ್ಕರ್ಮಿ ರಾಡ್ ಅನ್ನು ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಟ್ರೈನರ್ ಅವರನ್ನು ಕಂಡ ಅವರ ಸ್ನೇಹಿತರು ತಕ್ಷಣ ಆಟೋ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ಸಮಯದಲ್ಲಿ ದುಷ್ಕರ್ಮಿ ಮುಖ ಮುಚ್ಚಿಕೊಂಡಿದ್ದರಿಂದ ಆತ ಯಾರೆಂದು ಗುರುತಿಸಲು ಸಾಧ್ಯವಾಗಿಲ್ಲ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ವಿನೋಬಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Author