ಹಾಸನ, ಇನ್ನೇನು 10 ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನೋರ್ವ, ಪ್ರೀ ವೆಡ್ಡಿಂಗ್ ಶೂಟ್ಗೆ ಹೋಗುತ್ತಿದ್ದ ವೇಳೆ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಗಲಿ ಗ್ರಾಮದ ಬಳಿ ಗುರುವಾರ (ಇಂದು) ಬೆಳಗ್ಗೆ ಈ ಘಟನೆ ಸಂಭವಿಸಿದೆ.ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು ಎಲ್.ಎನ್. ಅಪಘಾತದಲ್ಲಿ ಮೃತಪಟ್ಟ ಯುವಕ.

ಮೇ 10, 2026ರಂದು ಮನು ವಿವಾಹ ನಿಶ್ಚಯವಾಗಿತ್ತು. ಭಾವಿ ವರ ಸಾವಿಗೀಡಾಗಿರುವುದು ಮದುವೆ ಮನೆಯ ಸಂಭ್ರಮದಲ್ಲಿರಬೇಕಾದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.
ಮದುವೆಗೆ ಭರದಿಂದ ಸಿದ್ಧತೆ ನಡೆದಿದ್ದು, ಪ್ರೀ ವೆಡ್ಡಿಂಗ್ ಶೂಟ್‌ಗೆಂದು ಭಾವಿ ಪತ್ನಿಯನ್ನು ಕರೆ ತರಲು ಕಾರಿನಲ್ಲಿ ಮನು ಹೋಗುತ್ತಿದ್ದರು. ಈ ವೇಳೆ ಮೂಗಲಿ ಬಳಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

