ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತದಲ್ಲಿ ಮೃತಪಟ್ಟವರ ಅಧಿಕೃತ ಮಾಹಿತಿ ಬಿಡುಗಡೆ ಹಾಗೂ ಪರಿಹಾರ ಘೋಷಣೆ

ಬೆಂಗಳೂರು

ಬೆಂಗಳೂರು, ಏಪ್ರಿಲ್ 29 ರ ಬುಧವಾರ ಸಂಜೆ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ಘೋರ ದುರಂತದಲ್ಲಿ ಮೃತಪಟ್ಟ ಏಳು ಜನರ ಅಧಿಕೃತ ಮಾಹಿತಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.

ಈ ಭೀಕರ ಘಟನೆಯಲ್ಲಿ ಬೆಂಗಳೂರು ಮೂಲದವರು ಮಾತ್ರವಲ್ಲದೆ, ಕೇರಳದ ಪ್ರವಾಸಿಗರು ಹಾಗೂ ಅಂತರರಾಜ್ಯ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಬೌರಿಂಗ್ ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ನಂತರ ಬಿಡುಗಡೆಯಾದ ಪಟ್ಟಿಯ ಪ್ರಕಾರ ಮೃತರ ವಿವರ ಹೀಗಿದೆ;

ಬೆಂಗಳೂರಿನ ಜೆಸಿ ನಗರದ ಮೊಹಮ್ಮದ್ ಅಬ್ದುಲ್ (52) ಡಿ.ಜೆ.ಹಳ್ಳಿಯ ಫಯಾಜ್ ಅಹ್ಮದ್ (39)ಕೆ.ಜೆ.ಹಳ್ಳಿಯ ಮುಸಾವಿರ್ ಬೇಗಂ (6)ಕೇರಳದ ಎರ್ನಾಕುಲಂನ ಸ್ಮಿತಾ (47) ಹಾಗೂ ಲತಾ (57)ಕಾರ್ ಸ್ಟಿಕ್ಕರಿಂಗ್ ಕೆಲಸ ಮಾಡುತ್ತಿದ್ದ ಅಸ್ಸಾಂನ ನಸೀಮುಲ್ಲಾ (19) ಉತ್ತರ ಪ್ರದೇಶದ ವ್ಯಾಪಾರಿ ಸಲಾವುದ್ದೀನ್ ಅನ್ಸಾರಿ (36).

ಏಪ್ರಿಲ್ 29ರ ಬುಧವಾರ ಸಂಜೆ ಸುಮಾರು 5 ಗಂಟೆಯ ಸುಮಾರಿಗೆ ಬೆಂಗಳೂರಿನಲ್ಲಿ ದಿಢೀರ್ ಗುಡುಗು ಸಹಿತ ಭಾರಿ ಮಳೆ ಮತ್ತು ಆಲಿಕಲ್ಲು ಮಳೆ ಆರಂಭವಾಯಿತು. ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಬಿರುಗಾಳಿಯಿಂದ ತಪ್ಪಿಸಿಕೊಳ್ಳಲು ಪಾದಚಾರಿಗಳು ಮತ್ತು ಬೀದಿ ಬದಿಯ ವ್ಯಾಪಾರಿಗಳು ಬೌರಿಂಗ್ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆಯ ಕೆಳಗೆ ಆಶ್ರಯ ಪಡೆದಿದ್ದರು.

ಮಳೆಯ ತೀವ್ರತೆಗೆ ದುರ್ಬಲವಾಗಿದ್ದ ಗೋಡೆಯು ಏಕಾಏಕಿ ಕುಸಿದುಬಿದ್ದ ಪರಿಣಾಮ, ಗೋಡೆಯ ಕೆಳಗಿದ್ದವರು ಅವಶೇಷಗಳಡಿ ಸಿಲುಕಿಕೊಂಡರು. ಸ್ಥಳೀಯರು ಮತ್ತು ತುರ್ತು ಸೇವಾ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯ ನಡೆಸಿದರೂ, ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಕಾಂಪೌಂಡ್ ಬಳಿ ನಡೆಸುತ್ತಿದ್ದ ನಿರ್ಮಾಣ ಕಾಮಗಾರಿಯ ಮಣ್ಣಿನ ಒತ್ತಡದಿಂದ ಗೋಡೆ ಕುಸಿದಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ.

Author