ಹೊಸನಗರ | ಬಾಕಿ ಹಣ ಕೇಳಿದ್ದಕ್ಕೆ ಫ್ಯಾನ್ಸಿ ಸ್ಟೋರ್ ನೌಕರನ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ ; ದೂರು ದಾಖಲು

ಶಿವಮೊಗ್ಗ

ಹೊಸನಗರ ​,ರಿಪ್ಪನ್‌ಪೇಟೆಯಲ್ಲಿ ಸಾಲದ ಬಾಕಿ ಹಣ ಕೇಳಿದ್ದಕ್ಕೆ ಫ್ಯಾನ್ಸಿ ಸ್ಟೋರ್ ನೌಕರನೊಬ್ಬನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯಲ್ಲಿ ನಡೆದಿದೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.​ಪಟ್ಟಣದ ವಿನಾಯಕ ವೃತ್ತದಲ್ಲಿರುವ ‘ಮಾಜೀಷಾ ಫ್ಯಾನ್ಸಿ ಸ್ಟೋರ್’ನಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿರುವ ವಿನಯ್ ಪುರಿ (24) ಹಲ್ಲೆಗೊಳಗಾದ ಯುವಕ. ಇದೇ ಊರಿನ ‘ಭಾಗ್ಯಲಕ್ಷ್ಮೀ ಫ್ಯಾನ್ಸಿ ಸ್ಟೋರ್’ನ ರಮೇಶ್ ಫ್ಯಾನ್ಸಿ ಎಂಬಾತನೇ ಹಲ್ಲೆ ನಡೆಸಿದ ಆರೋಪಿ.​

ಘಟನೆಯ ವಿವರ:

ಆರೋಪಿ ರಮೇಶ್ ತನ್ನ ಅಂಗಡಿಗೆ ಮಾಜೀಷಾ ಫ್ಯಾನ್ಸಿ ಸ್ಟೋರ್‌ನಿಂದ ಆಗಾಗ್ಗೆ ವಸ್ತುಗಳನ್ನು ಖರೀದಿಸುತ್ತಿದ್ದ. ಆದರೆ, ಆ ವಸ್ತುಗಳ ಬಾಕಿ ಹಣವನ್ನು ಪಾವತಿಸಿರಲಿಲ್ಲ ಎನ್ನಲಾಗಿದೆ. ಹಲವು ಬಾರಿ ಹಣ ಕೇಳಿದರೂ ಆತ ಕೊಟ್ಟಿರಲಿಲ್ಲ.

ಏಪ್ರಿಲ್ 27ರಂದು ಮಾಜೀಷಾ ಫ್ಯಾನ್ಸಿ ಸ್ಟೋರ್‌ನ ಮಾಲೀಕರಾದ ಬಾಲು ಭಾರತಿ ಅವರು ಊರಿನಲ್ಲಿ ಇರಲಿಲ್ಲ. ಈ ವೇಳೆ ಅಂಗಡಿಯ ಸಂಪೂರ್ಣ ಉಸ್ತುವಾರಿಯನ್ನು ವಿನಯ್ ನೋಡಿಕೊಳ್ಳುತ್ತಿದ್ದರು.​ಮಧ್ಯಾಹ್ನ 12 ಗಂಟೆ ಸುಮಾರಿಗೆ ಏಕಾಏಕಿ ಅಂಗಡಿಯೊಳಗೆ ನುಗ್ಗಿದ ರಮೇಶ್, ವಿನಯ್‌ಗೆ ಅವಾಚ್ಯ ಶಬ್ದಗಳಿಂದ ಬೈದು, ಎಡ ಕಪಾಳಕ್ಕೆ ಬಲವಾಗಿ ಹೊಡೆದಿದ್ದಾನೆ. ಅಲ್ಲದೆ, ಅಂಗಡಿಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, “ಹೊರಗಡೆ ಬಾ ನಿನಗೆ ನೋಡಿಕೊಳ್ಳುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.​

ಗಲಾಟೆ ನಡೆಯುತ್ತಿದ್ದಾಗ ಅಂಗಡಿಯಲ್ಲಿದ್ದ ಮತ್ತೊಬ್ಬ ನೌಕರ ಹರೀಶ್ ಮಧ್ಯ ಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಹಲ್ಲೆಯಿಂದ ಕಿವಿಗೆ ಮತ್ತು ಕಪಾಳಕ್ಕೆ ಪೆಟ್ಟಾಗಿದ್ದು, ನೋವಿನಿಂದ ಬಳಲುತ್ತಿದ್ದ ವಿನಯ್ ಅವರು ರಿಪ್ಪನ್‌ಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನಂತರ ಠಾಣೆಗೆ ತೆರಳಿ ಆರೋಪಿ ರಮೇಶ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿದ್ದಾರೆ. ರಿಪ್ಪನ್‌ಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Author