ಶಿವಮೊಗ್ಗ | ಪ್ರವಾಸಕ್ಕೆ ಹೋದ ಭದ್ರಾ ಹಿನ್ನೀರಲ್ಲಿ ಶವವಾದ

ಶಿವಮೊಗ್ಗ

ಶಿವಮೊಗ್ಗ, ನರಸಿಂಹರಾಜಪುರ ತಾಲೂಕು ಭೈರಾಪುರ ಗ್ರಾಮದ ಮಾರಿ ದಿಬ್ಬದ ಸಮೀಪ ಭದ್ರಾ ಹಿನ್ನೀರಿನಲ್ಲಿ ಭಾನುವಾರ ನಾಪತ್ತೆಯಾಗಿದ್ದ ಶಿವಮೊಗ್ಗ ತಾಲೂಕು ಒಡ್ಡಿನಕೊಪ್ಪ ನಿವಾಸಿ ಮಧುಸೂದನ್ (44) ಅವರ ಶವ ನಿನ್ನೆ ಸೋಮವಾರ ಪತ್ತೆಯಾಗಿದೆ.

ಭಾನುವಾರ ಮಧುಸೂದನ್ ಅವರು ಸಹೋದರಿ ಮಮತಾ ಹಾಗೂ ಅವರ ಕುಟುಂಬದವರೊಂದಿಗೆ ಮಾರಿದಿಬ್ಬದ ಸಮೀಪ ಭದ್ರಾ ಹಿನ್ನೀರು ನೋಡಲು ಹೋಗಿದ್ದರು. ಈ ವೇಳೆ ಮಧುಸೂದನ್ ಹಿನ್ನೀರಿನಲ್ಲಿ ಈಜಾಡುತ್ತಾ ಮುಂದೆ ಸಾಗಿದ್ದು ಇದ್ದಕ್ಕಿದ್ದಂತೆ ಮುಳುಗಿ ನಾಪತ್ತೆ ಯಾಗಿದ್ದರು. ಸಹೋದರಿ ಮಮತಾ ಹಾಗೂ ಅವರ ಕುಟುಂಬದವರು ಹುಡುಕಾಡಿದರೂ ಮಧುಸೂದನ್ ಪತ್ತೆಯಾಗಿಲ್ಲ.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ಪಿಎಸ್‌ಐ ಡಿ.ಇ.ನೂತನ್ ಅವರು ಅಗ್ನಿ ಶಾಮಕದಳದ ಸಿಬ್ಬಂದಿ ಯೊಂದಿಗೆ ಸ್ಥಳಕ್ಕೆ ಧಾವಿಸಿ ಹಿನ್ನೀರಿನಲ್ಲಿ ಶೋಧ ಕಾರ್ಯ ನಡೆಸಿದರು. ರಾತ್ರಿಯಾಗಿದ್ದರಿಂದ ಕಾರ್ಯಾಚರಣೆ ನಿಲ್ಲಿಸಿದ್ದರು.ಸೋಮವಾರ ಬೆಳಗ್ಗೆ 7.30ರ ವೇಳೆಗೆ ಮಧುಸೂದನ್ ಅವರ ಮೃತದೇಹ ಹಿನ್ನೀರಿನಲ್ಲಿ ತೇಲುತ್ತಿದ್ದು, ಪೊಲೀಸರು, ಅಗ್ನಿ ಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ನೀರಿನಿಂದ ಹೊರತೆಗೆಯಲಾಯಿತು.

ಮೃತರ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕುಟುಂಬದವರಿಗೆ ಮೃತದೇಹ ವನ್ನು ಹಸ್ತಾಂತರಿಸಲಾಯಿತು. ಸಹೋದರಿ ಮಮತಾ ನೀಡಿದ ದೂರು ಆಧರಿಸಿ ನರಸಿಂಹರಾಜಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author