ಶಿವಮೊಗ್ಗ, ಭದ್ರಾವತಿ ನಗರದಲ್ಲಿರುವ ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್, ವಿಐಎಸ್ಎಲ್ ಕಾರ್ಖಾನೆಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಕಬ್ಬಿಣದ ಬಿಲ್ಲೆಟ್ ಬಿದ್ದು ಗುತ್ತಿಗೆ ಕಾರ್ಮಿಕರೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಭದ್ರಾವತಿಯ ನಿವಾಸಿ ವಿನೋದ್ ಕುಮಾರ್ ಎಸ್ (36) ಮೃತಪಟ್ಟ ನೌಕರ. ಕಳೆದ 15 ವರ್ಷಗಳಿಂದ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದ ವಿನೋದ್. ವಿಐಎಸ್ಎಲ್ ಆವರಣದಲ್ಲಿ ಕಬ್ಬಿಣದ ಬಿಲ್ಲೆಟ್ ಅನ್ನು ಅನ್ಲೋಡ್ ಮಾಡುವ ಕೆಲಸದಲ್ಲಿದ್ದರು. ಈ ವೇಳೆ ಅವಗಢ ಸಂಭವಿಸಿದೆ.ಕಾರ್ಖಾನೆಯ ಸಿಸ್ಟರ್ ಪ್ಲಾಂಟ್ನಿಂದ ತರಿಸಲಾಗಿದ್ದ ಭಾರೀ ತೂಕದ ಬಿಲ್ಲೆಟ್ಗಳನ್ನು ಕ್ರೇನ್ ಮೂಲಕ ಇಳಿಸುವಾಗ ಏಕಾಏಕಿ ಕ್ರೇನ್ನ ವೈರ್ ರೋಪ್ (ಕೇಬಲ್) ತುಂಡಾಗಿದೆ.
ಈ ವೇಳೆ ಮೇಲಿದ್ದ ಬಿಲ್ಲೆಟ್ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕ ವಿನೋದ್ ಕುಮಾರ್ ಅವರ ಎಡಗಾಲಿನ ಮೇಲೆ ಬಿದ್ದಪರಿಣಾಮ ಸೊಂಟದ ಭಾಗದಲ್ಲಿ ತೀವ್ರ ಪೆಟ್ಟಾಗಿ ವಿಪರೀತ ರಕ್ತಸ್ರಾವ ಉಂಟಾಗಿದೆ. ಗಾಯಾಳುವನ್ನು ಕೂಡಲೇ ಸ್ಥಳೀಯ ದುರ್ಗಾ ನರ್ಸಿಂಗ್ ಹೋಮ್ಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು.
ಆದರೆ, ಅತಿಯಾದ ರಕ್ತಸ್ರಾವದ ಕಾರಣ ಆಸ್ಪತ್ರೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

