ಭದ್ರಾವತಿ | ಹಲ್ಲೆ ನಡೆಸಿ ಜೀವ ಬೆದರಿಕೆ ; ಇಬ್ಬರಿಗೆ ಶಿಕ್ಷೆ, ದಂಡ

ಶಿವಮೊಗ್ಗ

ಭದ್ರಾವತಿ, ಮಹಿಳೆಯೊಬ್ಬರ ಮನೆಗೆ ಅತಿಕ್ರಮವಾಗಿ ನುಗ್ಗಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳಿಗೆ ಇಲ್ಲಿನ ನ್ಯಾಯಾಲಯವು ಕಠಿಣ ಕಾರಾವಾಸ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಘಟನೆಯ ಹಿನ್ನೆಲೆ

ಭದ್ರಾವತಿಯ ಕೆ.ಹೆಚ್. ನಗರದ ನಿವಾಸಿಯಾದ ಮಹಿಳೆಯೊಬ್ಬರ ಮನೆಗೆ ಆರೋಪಿಗಳಾದ ಉಮೇಶ್ (49) ಮತ್ತು ನಂದನ್ (22) ಎಂಬುವವರು ಜಾಗದ ವಿಚಾರವಾಗಿ ಅಕ್ರಮವಾಗಿ ಪ್ರವೇಶಿಸಿದ್ದರು.

ಈ ವೇಳೆ ಮಹಿಳೆಗೆ ಜಾತಿ ನಿಂದನೆ ಮಾಡಿ, ಕಾಲಿನಿಂದ ಹಲ್ಲೆ ನಡೆಸಿದ್ದಲ್ಲದೆ ಪ್ರಾಣ ಬೆದರಿಕೆ ಒಡ್ಡಿದ್ದರು. ಈ ಸಂಬಂಧ ಹೊಸಮನೆ ಪೊಲೀಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಅಂದಿನ ಭದ್ರಾವತಿ ಎಎಸ್‌ಪಿ ಆಗಿದ್ದ ಜಿತೇಂದ್ರ ಕುಮಾರ್ ದಯಾಮ (ಐಪಿಎಸ್) ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಅಭಿಯೋಜ ರತ್ನಮ್ಮ ಪಿ. ಅವರು ಪ್ರಬಲವಾಗಿ ವಾದ ಮಂಡಿಸಿ, ಆರೋಪಿಗಳ ಮೇಲಿನ ಅಪರಾಧವನ್ನು ಸಾಬೀತುಪಡಿಸುವಲ್ಲಿ ಯಶಸ್ವಿಯಾದರು.

ವಾದ-ಪ್ರತಿವಾದಗಳನ್ನು ಆಲಿಸಿದ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, ಆರೋಪಿಗಳು ದೋಷಿಗಳು ಎಂದು ತೀರ್ಮಾನಿಸಿ ತಲಾ 2 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ವಿಧಿಸಿದ್ದಾರೆ.

ಇದರೊಂದಿಗೆ ಒಟ್ಟು 62,000 ರೂಪಾಯಿ ದಂಡ ವಿಧಿಸಲಾಗಿದ್ದು, ನೊಂದ ಮಹಿಳೆಯರಿಗೆ ತಲಾ 25,000 ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ.

Author