ಶಿವಮೊಗ್ಗ, ಆಧುನಿಕ ಕಾಲಘಟ್ಟದಲ್ಲಿ ಗ್ರಾಮೀಣ ಭಾಗ ಸೇರಿದಂತೆ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿನಿಯರು ಕೀಳರಿಮೆ ಬಿಟ್ಟು ಉತ್ತಮವಾಗಿ ವ್ಯಾಸಂಗ ಮಾಡಿ ಭವಿಷ್ಯ ರೂಪಿಸಿಕೊಳ್ಳಬೇಕು. ಸುಶಿಕ್ಷಿತರಾದಲ್ಲಿ ಮಹಿಳೆ ಸಬಲರಾಗಲು ಸಾಧ್ಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಪರಿಷತ್ ನಿರ್ದೇಶಕ ಹಾಗೂ ಶಿಕ್ಷಣ ನಿಕಾಯದ ಡೀನ್ ಪ್ರೊ. ಗಜಾನನ ಪ್ರಭು ಹೇಳಿದರು.
ಶ್ರೀ ಪಾರ್ಶ್ವನಾಥ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಏ.26ರ ಭಾನುವಾರ ಬೆಳಿಗ್ಗೆ ಕೋಟೆ ರಸ್ತೆಯ ವಾಸವಿ ವಿದ್ಯಾಲಯದ ಆವರಣದಲ್ಲಿರುವ ಚಿಗುರು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಆತ್ಮಗೌರವ ಹೊಂದಿ ಸ್ವಾವಲಂಬಿಗಳಾಗಬೇಕು. ಮುನ್ನುಗ್ಗುವ ಪ್ರವೃತ್ತಿ ಹೆಚ್ಚಬೇಕು. ಸಮಾಜದಲ್ಲಿ ಉನ್ನತ ಸ್ಥಾನಗಳಿಸಲು ಶಿಕ್ಷಣವೇ ಪ್ರಮುಖ ಸಾಧನವಾಗಿದೆ. ಮಹಿಳೆಯರು ಸುಶಿಕ್ಷಿತರಾಗಿ ಶೈಕ್ಷಣಿಕವಾಗಿ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಯಶಸ್ಸು ಸಾಧಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ಪಾರ್ಶ್ವನಾಥ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ಪ್ರಶಾಂತ್ ಮಾತನಾಡಿ ಈ ಮಹಾವಿದ್ಯಾಲಯವು ಬೆಂಗಳೂರು ಮತ್ತು ಮಂಗಳೂರನ್ನು ಹೊರತುಪಡಿಸಿ ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಧಾರವಾಡ ಜಿಲ್ಲೆಗಳ ಏಕೈಕ ಮಹಿಳಾ ಬಿಇಡಿ ಕಾಲೇಜು ಇದಾಗಿದೆ.
ವಿದ್ಯಾರ್ಥಿನಿಯರು ಇಲ್ಲಿನ ಶೈಕ್ಷಣಿಕ ವ್ಯವಸ್ಥೆಯ ಪ್ರಯೋಜನ ಪಡೆದು ಉನ್ನತಿ ಸಾಧಿಸಬೇಕೆಂದು ಆಶಿಸಿದರು. ವೇದಿಕೆಯಲ್ಲಿ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಎಂ. ಮುಸವಿರ್ ಭಾಷಾ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಲ್. ಶ್ಯಾಮ ಸುಂದರ್, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಮಹಾಂತೇಶ್ ಪಾಟೀಲ್, ಸಹಾಯಕ ಪ್ರಾಧ್ಯಾಪಕರು ಶ್ರೀ ಸಂತೋಷ್ ಕುಮಾರ್ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಅಲಿಯಾ ಖಾನಂ, ಕಾರ್ಯದರ್ಶಿ ಎಂ. ಕಾವ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಬ್ಬಲಗೆರೆ ಗ್ರಾಪಂ ಮಾಜಿ ಅಧ್ಯಕ್ಷೆ ಭಾಗ್ಯ, ಅರಣ್ಯ ಇಲಾಖೆಯ ಫಾರುಕ್ ಭಾಷಾ, ಮೋಹನ್, ಎಂ. ಮುಸವಿರ್ ಭಾಷಾ, ಮತ್ತು ಡಾ. ಮಹಾಂತೇಶ್ ಪಾಟೀಲ್ ಇವರನ್ನು ಸನ್ಮಾನಿಸಲಾಯಿತು.
ಮೇಘನಾ ಮತ್ತು ತಂಡ ಪ್ರಾರ್ಥಿಸಿ, ಪ್ರಕಾಶ್ ಸಿ. ಸ್ವಾಗತಿಸಿ ಡಾ.ಎಂ.ಎಸ್. ಪ್ರಶಾಂತ್ ಪ್ರಾಸ್ತಾವಿಸಿ, ಹೆಚ್.ಬಿ. ಬೇಬಿಬಾಯಿ ನಿರೂಪಿಸಿ, ಎ. ವಾಣಿಶ್ರೀ ವಂದಿಸಿದರು.

