ರಸ್ತೆಯಲ್ಲೇ ಪಲ್ಟಿಯಾಗಿ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್ ; ಅರಣ್ಯಕ್ಕೂ ವ್ಯಾಪಿಸಿದ ಬೆಂಕಿ!

ಕಾರವಾರ

ಬೆಳಗಾವಿಯಿಂದ ಮಂಗಳೂರಿಗೆ ಎಥನಾಲ್ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಸ್ಫೋಟಗೊಂಡ ಪರಿಣಾಮ ಹೆದ್ದಾರಿಯಲ್ಲಿ ಬೆಂಕಿ ಆವರಿಸಿದ ಘಟನೆ ಗುರುವಾರ ಕಂಚಿನಬಾಗಿಲು ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಸಂಭವಿಸಿದೆ. ಅಪಘಾತದಲ್ಲಿ ಟ್ಯಾಂಕರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟ್ಯಾಂಕರ್ ಉರುಳಿದ ತಕ್ಷಣ ಎಥನಾಲ್ ದ್ರಾವಣ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಟ್ಯಾಂಕರ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹತ್ತಿರದ ಮರಗಿಡಗಳಿಗೂ ಬೆಂಕಿ ವ್ಯಾಪಿಸಿದೆ. ಗಾಯಗೊಂಡ ಚಾಲಕನನ್ನು ಅಂಕೋಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕ್ರಿಮ್ಸ್‌ಗೆ ದಾಖಲಿಸಲಾಗಿದೆ.

ಅಂಕೋಲಾ, ಕಾರವಾರ ಮತ್ತು ಐಎನ್‌ಎಸ್ ವಜ್ರಕೋಶದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಘಟನೆಯಿಂದಾಗಿ ಅಂಕೋಲಾ–ಯಲ್ಲಾಪುರ ಮಾರ್ಗದಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸ್ಥಳಕ್ಕೆ ತಹಶೀಲ್ದಾರ್ ನೋರೊನಾ ಹಾಗೂ ಡಿವೈಎಸ್ಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Author