ದಾವಣಗೆರೆ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ನಕಾರ ; ಸಚಿವ ಜಮೀರ್ ಅಹ್ಮದ್ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಿದ ಸುರ್ಜೆವಾಲ

ರಾಜಕೀಯ

ಬೆಂಗಳೂರು, ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸದಿದ್ದಕ್ಕಾಗಿ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಮೂವರ ವಿರುದ್ಧ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಹೈಕಮಾಂಡ್‌ಗೆ ದೂರು ನೀಡಿದ್ದಾರೆ.

ಸಚಿವರಾದ ಜಮೀರ್ ಅಹಮದ್, ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ ಹಾಗೂ ನಸೀರ್ ಅಹಮದ್ ವಿರುದ್ಧ ಎರಡು ಪುಟಗಳ ಸಂಪೂರ್ಣ ವರದಿ ಸಮೇತ ಸುರ್ಜೇವಾಲಾ ಅವರು ದೂರು ದಾಖಲಿಸಿದ್ದು, ಮೂವರ ಮೇಲೆ ಕ್ರಮವಹಿಸುವಂತೆ ಉಲ್ಲೇಖಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಆದರೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂದು ಸಚಿವ ಜಮೀರ್ ಅಹ್ಮದ್ ಅವರು ಒತ್ತಾಯ ಮಾಡಿದ್ದರು. ಇದರಿಂದ ಸಚಿವ ಮಲ್ಲಿಕಾರ್ಜುನ್ ಏಕವಚನದಲ್ಲಿ ನಿಂದನೆ ಮಾಡಿದ್ದು, ಇದು ಅಲ್ಪಸಂಖ್ಯಾತ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದರಿಂದ ಜಮೀರ್ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಮತಪ್ರಚಾರಕ್ಕೆ ಬರುತ್ತಾರೋ ಇಲ್ಲವೋ ಎನ್ನುವ ಅನುಮಾನ ಕೂಡ ವ್ಯಕ್ತವಾಗಿತ್ತು. ಆದರೆ ಜಮೀರ್ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ನಿವಾಸಕ್ಕೆ ಆಗಮಿಸಿ ಊಟ ಮಾಡಿ, ಈ ಬಾರಿ ಸಮರ್ಥ್ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತಾರೆ.

ನಾನು ಕೇರಳ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಆಗಿದ್ದೆ. ಆದ್ದರಿಂದ ಬರಲಾಗಲಿಲ್ಲ. ಇದೀಗ ಬಂದಿದ್ದೇನೆ, ಮತ್ತೆ ಬಾಗಲಕೋಟೆಗೆ ಹೋಗುತ್ತೇನೆ ಎಂದು ಹೇಳಿ ಕೇವಲ ಸುದ್ದಿಗೋಷ್ಠಿ ನಡೆಸಿ, ಜಾಗ ಖಾಲಿ ಮಾಡಿದ್ದರು

Author