ಶಿವಮೊಗ್ಗ | ನಮ್ಮ ಶಾಲೆಯ ಸಮಸ್ಯೆ ಬಗೆಹರಿಸಿ ; ಇಲ್ಲವೇ ಶಾಲೆಗೆ ಬೀಗ ಹಾಕುತ್ತೇವೆ..?

ಶಿವಮೊಗ್ಗ

ಶಿವಮೊಗ್ಗದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರನ್ನ ವರ್ಗಾವಣೆ ಮಾಡುವ ಮೂಲಕ ಶಾಲೆಯಲ್ಲಿ ಶಾಂತ ವಾತಾವರಣ ಮೂಡಿಸಿ ಎಂದು ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಅವರು ಹೀಗೊಂದು ಗಂಭೀರ ಆರೋಪ ಮಾಡುತ್ತಿದ್ದಾರೆ.

ಹೌದು, ಶಿವಮೊಗ್ಗ ತಾಲ್ಲೂಕು, ಬಿದರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಒಂದರಿಂದ ರಿಂದ ಏಳನೇ ತರಗತಿಯವರೆಗೆ ಸುಮಾರು 46 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಯಲ್ಲಿ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಸೇರಿ ಇಬ್ಬರು ಇದ್ದಾರೆ, ಹಾಗೂ ಅತಿಥಿ ಶಿಕ್ಷರು-ಒಬ್ಬರು ಇದ್ದಾರೆ.

ಈ ಶಾಲೆಯಲ್ಲಿ ಕಳೆದ 7-8 ವರ್ಷಗಳಿಂದ ಶ್ರೀಮತಿ ಮಂಜುಳ ಎಂಬುವವರು ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರುಗಳ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

ಶಿಕ್ಷಕಿ ಮಂಜುಳ ಅವರು ಶಾಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ, ಮಕ್ಕಳಿಗೆ ಈ ಶಾಲೆಗೆ ಬರಲು ಭಯ ವಾತಾವರಣ ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಮಕ್ಕಳೊಂದಿಗೆ ಸ್ನೇಹಮಯಿ ವರ್ತನೆ ಮಾಡುತ್ತಿಲ್ಲ ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕಾರಣದಿಂದ ಮಕ್ಕಳಿಗೆ ಶಾಲೆಗೆ ಬರುವಂತೆ, ಆಸಕ್ತಿ ಬರುವಂತೆ ಸದರಿ ಶಿಕ್ಷಕಿಗೆ ಉತ್ತಮ ವಾತಾವರಣ ನಿರ್ಮಾಣ ಆಗುತ್ತಿಲ್ಲ.

ಹಾಗಾಗಿ ಶಿಕ್ಷಕಿ ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ತಿಳಿಹೇಳಿ ಕಲಿಸುವ ಬದಲು ಹಲ್ಲೆ, ಅವಾಚ್ಯ, ಶಬ್ದ ಬಳಕೆ ಮಾಡಿ ಮಕ್ಕಳಿಗೆ ಮಾನಸಿಕ ಹಿಂಸೆ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡುತ್ತಿದ್ದಾರೆ ಪೋಷಕರು.

ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಧಕ್ಕೆ ಆಗಿದೆ. ಆದ್ದರಿಂದ ಪೋಷಕರು ಸದರಿ ಶಿಕ್ಷಕಿ ವರ್ತನೆಯಿಂದ ಬೇಸರಗೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಒಪ್ಪುತ್ತಿಲ್ಲ. ಶಿಕ್ಷಕಿ ಶಾಲಾ ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ಹಾಗೂ ಬಂದರು ಸಹ ಶಾಲಾ ಅವಧಿ ಮುನ್ನವೇ ಮನೆಗೆ ಹೋಗುತ್ತಾರೆ. ಶಾಲೆಯಲ್ಲಿ ಯಾವುದೇ ಕಾರ್ಯಕ್ರಮ ಆಯೋಜನೆ ನಿರೂಪಣೆ ಮಾಡುತ್ತಿಲ್ಲ.

ಕಳೆದ 7ವರ್ಷದಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬೇರೆ ಸಿಬ್ಬಂದಿ ಮೇಲೆ ಅನವಶ್ಯಕ ಆರೋಪ ಮಾಡುತ್ತಾರೆ ಶಾಲೆಯಲ್ಲಿ ಶಿಕ್ಷಕಿ ಮಂಜುಳ ಅವರು ಆಶಾಂತಿ ವಾತಾವರಣ ಸೃಷ್ಟಿ ಮಾಡಿ, ಶೈಕ್ಷಣಿಕ ವಾತಾವರಣ ಹಾಳು ಮಾಡುತ್ತಿದ್ದು, ಸದರಿ ಸಹ ಶಿಕ್ಷಕಿ ಮಂಜುಳಾ ಇವರನ್ನು ಬೇರೆ ಕಡೇ ವರ್ಗಾವಣೆ ಮಾಡಿ, ಉತ್ತಮ ಪಾಠ ಮಾಡುವ ಶಿಕ್ಷಕರನ್ನು ಸದರಿ ಶಾಲೆ ವರ್ಗಾವಣೆ/ ನಿಯೋಜನೆ ಮಾಡಿಕೊಡಬೇಕಾಗಿ ಈ ಮೂಲಕ ಕೋರುತ್ತೇವೆ ಎಂದು ಶಿವಮೊಗ್ಗ ತಾಲೂಕ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಉಪನಿರ್ದೇಶಕರಿಗೆ (DDPI)ಹಾಗೂ ಶಿಕ್ಷಣ ಸಚಿವರ ಮಧು ಬಂಗಾರಪ್ಪನವರಿಗೆ ಪೋಷಕರು ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಮತ್ತು ವಿದ್ಯಾರ್ಥಿಗಳು ಮನವಿ ನೀಡಿರುತ್ತಾರೆ.

ಈ ಸಂಬಂಧ ಬಹಳ ದಿನದ ಹಿಂದೆಯೇ ಮನವಿ ನೀಡಿದ್ದೇವೆ ಇಲ್ಲಿಯವರೆಗೆ ಸಂಬಂಧಪಟ್ಟ ಅಧಿಕಾರಿಗಳು ಯಾರು ಸಹ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.

ಹಾಗಾಗಿ ಎರಡು ಮೂರು ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಶಾಲೆಗೆ ಬೀಗ ಹಾಕಿ ಪ್ರತಿಭಟಿಸುವುದಾಗಿ ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಅವರು ಮಾಹಿತಿ ತಿಳಿಸಿದ್ದಾರೆ.

ಈ ಸಂಬಂಧ ನಮ್ಮ ಇ-ಕನ್ನಡ ಸುದ್ದಿ ಮಾಧ್ಯಮಕ್ಕೆ ಮಾತನಾಡಿದ ಬಿಇಒ ರಮೇಶ್ ನಾಯ್ಕ್, ನಾಳೆ ದಿವಸ ಬಿದರೆ ಸರ್ಕಾರಿ ಶಾಲೆಗೆ ನಮ್ಮ ಅಧಿಕಾರಿಗಳಾದ ಬಿ ಆರ್ ಸಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಲಿದ್ದು, ಶೀಘ್ರದಲ್ಲಿ ಸಮಸ್ಯೆ ಬಗೆಹರಿಸಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಒಟ್ಟಾರೆ ಶಾಲೆ ಹಾಗೂ ಸುತ್ತಮುತ್ತಲಿನ ರಾಜಕೀಯಕ್ಕೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗದಿರಲಿ ಹಾಗೂ ಶೀಘ್ರವಾಗಿ ಸಮಸ್ಯೆ ಬಗೆಹರೆಯಲಿ ಎಂಬುದು ಸ್ಥಳೀಯರ ಅಗ್ರಹವಾಗಿದೆ.

Author