ಶಿವಮೊಗ್ಗ | ವಿಮಾನ ನಿಲ್ದಾಣದಲ್ಲಿ ಕರಡಿ ಪ್ರತ್ಯಕ್ಷ

ಶಿವಮೊಗ್ಗ

ಶಿವಮೊಗ್ಗ, ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದೊಳಗೆ ಕರಡಿ ಇಂದು ಬೆಳಗ್ಗೆ ನುಗ್ಗಿದ ಘಟನೆ ನಡೆದಿದೆ. ಕರಡಿ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಆಹಾರ ಅರಸುತ್ತ ಬಂದಿರುವ ಕರಡಿಯೊಂದು ಇಂದು ಬೆಳಗ್ಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕಾಣಿಸಿಕೊಂಡಿತ್ತು. ಅಲ್ಲಿನ ಮನೆಗಳು, ತೋಟಗಳ ಪಕ್ಕದಲ್ಲಿ ಕರಡಿ ಓಡಾಡಿದೆ. ಸ್ಥಳೀಯರು ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.

ವಿನಾಯಕ ನಗರದಲ್ಲಿ ಕರಡಿ ಕಾಣಿಸಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿದ್ದರು.

ಇದೇ ವೇಳೆ ವಿಮಾನ ನಿಲ್ದಾಣದ ಕಾಂಪೌಂಡ್‌ ಒಳಗೆ ಹಾರಿದೆ. ವಿಮಾನ ನಿಲ್ದಾಣದ ಕಾಂಪೌಂಡ್‌ ಒಳಗೆ ಪೊದೆ ಬೆಳೆದಿದ್ದು ಕರಡಿ ಅವಿತಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆಯೇ ವಿಮಾನ ನಿಲ್ದಾಣದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಲಾಗಿದ್ದು, ಉಂಬ್ಳೆಬೈಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸದ್ಯ ಕರಡಿಯನ್ನು ಸೆರೆ ಹಿಡಿಯಲಾಗಿದ್ದು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

Author