ಹಾಸನ | ಪ್ರೀ ವೆಡ್ಡಿಂಗ್‌ ಫೋಟೊಶೂಟ್‌ ತಂಡದ ಮೇಲೆ ಹಲ್ಲೆ ; ಆರೋಪಿಗಳ ಬಂಧನ

ಹಾಸನ

ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗುಂದ ಗ್ರಾಮದ ಬೆಟ್ಟದ ಬೈರವೇಶ್ವರ ದೇವಾಲಯದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೊ ಶೂಟ್‌ಗೆ ತೆರಳಿದ್ದ ಫೋಟೊ ಗ್ರಾಫರ್ಸ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೇಗುಲದ ಆವರಣದಲ್ಲಿ ಪ್ರೀ ವೆಡ್ಡಿಂಗ್‌ ಫೋಟೋ ಶೂಟ್‌ ಮಾಡುತ್ತಿದ್ದ ವೇಳೆ ಸ್ಥಳೀಯ ಕೆಲವರು ಫೋಟೊ ಶೂಟ್‌ ಮಾಡದಂತೆ ಅಡ್ಡಿ ಮಾಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಛಾಯಾಗ್ರಾಹಕ ಯಶ್‌ ಹಾಗೂ ತಂಡದ ಮೇಲೆ ಸ್ಥಳೀಯರ ಗುಂಪು ಹಲ್ಲೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

ಸಹೋದ್ಯೋಗಿ ಮೇಲೆ ಹಲ್ಲೆ ಆಗಿದೆ ಎಂದು ಹಾಸನ ಕುವೆಂಪು ನಗರದ ನವೀನ್‌ ನಂದನ್‌ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪೊಲೀಸರು ಸ್ಥಳೀಯ ನಿವಾಸಿಗಳಾದ ಪ್ರಶಾಂತ್‌ ಬೆಟ್ಟಗೆರೆ ಹಾಗೂ ರಕ್ಷಯ್‌ ಮಕ್ಕಿನ ಗದ್ದೆ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಹಲ್ಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಫೋಟೊಗ್ರಾಫರ್ಸ್ ಕುಟುಂಬದ ಸದಸ್ಯರು ಠಾಣೆ ಸಕಲೇಶಪುರ ಗ್ರಾಮಾಂತರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ದೂರುದಾರರ ನಡುವೆ ವಾದ-ವಿವಾದ ನಡೆಯಿತು.

ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ತುರ್ತು ಕ್ರಮ ಜರುಗಿಸಬೇಕು ಎಂದು ಫೋಟೋಗ್ರಾಫರ್‌ ಕುಟುಂಬದವರು ಆಗ್ರಹಿಸಿದರೆ, ಇದನ್ನು ಖಂಡಿಸಿದ 15ಕ್ಕೂ ಹೆಚ್ಚು ಗ್ರಾಮಸ್ಥರು, ‘ವಿಡಿಯೋದಲ್ಲಿ ಇರುವುದೆಲ್ಲ ನಿಜವಲ್ಲ.ಫೋಟೋಗ್ರಾಫರ್‌ ಸ್ಥಳೀಯರೊಡನೆ ಅಸಭ್ಯವಾಗಿ ವರ್ತಿಸಿದರು’’ ಎಂದು ಪ್ರತ್ಯಾರೋಪ ಮಾಡಿದರು.

Author