ಶಿವಮೊಗ್ಗ | ತಂದೆ ಸಾವಿನ ದುಃಖದಲ್ಲೇ ಪರಿಕ್ಷೆ ಬರೆದ ವಿದ್ಯಾರ್ಥಿನಿಗೆ ಧೈರ್ಯ ಸಾಂತ್ವನ ತುಂಬಿದ ಬಿಇಒ ರಮೇಶ್ ನಾಯ್ಕ್

ಶಿವಮೊಗ್ಗ

ಶಿವಮೊಗ್ಗ, ಭವಿಷ್ಯದ ಕನಸುಗಳು ಒಂದೆಡೆ, ಜನ್ಮಕೊಟ್ಟ ತಂದೆಯ ಅಂತಿಮ ಕ್ಷಣಗಳು ಮತ್ತೊಂದೆಡೆ ಈ ಎರಡು ಭಾವನೆಗಳ ನಡುವೆ ಸಿಲುಕಿದ ಹೃದಯದ ಹೋರಾಟ ಎಷ್ಟು ಕಠಿಣವಾಗಿರಬಹುದು ಎಂಬುದಕ್ಕೆ ಶಿವಮೊಗ್ಗ ತಾಲ್ಲೂಕಿನ ಹಸೋಡಿ ಫಾರಂ ಗ್ರಾಮದ ವಿದ್ಯಾರ್ಥಿನಿ ಶರಣ್ಯ ಉದಾಹರಣೆಯಾಗಿದ್ದಾಳೆ.

“ತಂದೆಯ ಸಾವಿನ ನೋವಿನಲ್ಲಿ ಪರೀಕ್ಷೆ ಬರೆಯುವುದು ತುಂಬಾ ಕಷ್ಟವಾಯಿತು. ಆದರೂ ತಾಯಿ, ಶಿಕ್ಷಕರು ಮತ್ತು ಗ್ರಾಮಸ್ಥರ ಬೆಂಬಲದಿಂದ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೇನೆ. ಆದರೆ ತಂದೆಯ ಕಳೆವಿನ ನೋವನ್ನು ಸಹಿಸಲು ಆಗುತ್ತಿಲ್ಲ. ನಮ್ಮ ಜೀವನ ಮುಂದೇ ಹೇಗಿರುತ್ತದೆ ಎಂಬುದು ಗೊತ್ತಿಲ್ಲ.”:

ವಿದ್ಯಾರ್ಥಿನಿ ಶರಣ್ಯ ತಂದೆ ತಂಗರಾಜ್ ಮತ್ತು ತಾಯಿ ಮೀನಾ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ಸಾಗಿಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಉತ್ತಮವಾಗಿ ಓದಿ ಬದುಕಿನಲ್ಲಿ ದೊಡ್ಡ ಮಟ್ಟಕ್ಕೇರಬೇಕು ಎಂಬ ಕನಸು ತಂದೆಗೆ ಇತ್ತು. ಆದರೆ ಅನಾರೋಗ್ಯದ ಹಿನ್ನೆಲೆ ತಂಗರಾಜ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದರು.

ಈ ದುರ್ಘಟನೆ ಮಂಗಳವಾರ ರಾತ್ರಿ ಸಂಭವಿಸಿತು. ಬುಧವಾರ ತರುಣ್ಯಗೆ 1೦ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ಇತ್ತು. ಒಂದೆಡೆ ತಂದೆಯ ಮರಣದ ದುಃಖ, ಮತ್ತೊಂದೆಡೆ ಭವಿಷ್ಯ ನಿರ್ಧರಿಸುವ ಪರೀಕ್ಷೆ ಈ ಸಂಕಷ್ಟಕರ ಪರಿಸ್ಥಿತಿಯಲ್ಲಿ ಆಕೆ ಗೊಂದಲಕ್ಕೀಡಾದಳು.

ಕುಟುಂಬದವರು, ಶಿಕ್ಷಕರು ಮತ್ತು ಸ್ನೇಹಿತರು ಧೈರ್ಯ ತುಂಬಿದ ಬಳಿಕ ತರುಣ್ಯ ಆತ್ಮಸ್ಥೈರ್ಯದಿಂದ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಳು.ನಂತರ ಮನೆಗೆ ಬಂದು ತಂದೆಯ ಅಂತಿಮ ದರ್ಶನ ಪಡೆದಳು.

ಈ ಘಟನೆ ಕೇವಲ ಒಂದು ವಿದ್ಯಾರ್ಥಿನಿಯ ನಿರ್ಧಾರವಲ್ಲ;

ಇದು ಸಂಕಷ್ಟಗಳ ನಡುವೆಯೂ ದಿಟ್ಟ ಮನೋಬಲದಿಂದ ಮುಂದೆ ಸಾಗುವ ಶಕ್ತಿಯ ಪ್ರತಿಬಿಂಬವಾಗಿದೆ. ತಂದೆಯ ಕಳೆವಿನ ನೋವಿನ ನಡುವೆಯೇ ತನ್ನ ಭವಿಷ್ಯದತ್ತ ಹೆಜ್ಜೆಯಿಟ್ಟ ಈ ವಿದ್ಯಾರ್ಥಿನಿ ಅನೇಕರಿಗೆ ಮಾದರಿಯಾಗಿದ್ದಾಳೆ.

ಇದೀಗ ತಾಯಿ ಮತ್ತು ತಂಗಿಯ ಭವಿಷ್ಯದ ಹೊಣೆ ಹೊತ್ತಿರುವ ಶರಣ್ಯಗೆ ಬದುಕಿನ ಹಾದಿ ಸವಾಲಿನಿಂದ ಕೂಡಿದೆ. ಎಲ್ಲಾ ಸಂಕಷ್ಟಗಳನ್ನು ಜಯಿಸಿ ಆಕೆಯ ಜೀವನ ಉಜ್ವಲವಾಗಲಿ ಎಂಬುದು ಎಲ್ಲರ ಆಶಯ.

ಇನ್ನು ಘಟನೆ ಸಂಬಂಧ ಇಂದು ದಿನಾಂಕ 27.03.2026ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳಗ್ಗೆ 8.45 ಕ್ಕೆ ಹಸೂಡಿ ಗ್ರಾಮದ ನಿವಾಸಿಗಳಾದ 10ನೇ ತರಗತಿ ವಿದ್ಯಾರ್ಥಿನಿಯಾದ ಶರಣ್ಯ ಮತ್ತು ಎಂಟನೇ ತರಗತಿ ಪೂರ್ಣಿಮಾ ಇವರ ಮನೆಗೆ ಭೇಟಿ ನೀಡಿ ,ತಂದೆಯ ಅಕಾಲಿಕ ಮರಣದಿಂದ ನೊಂದಿರುವ ಇವರಿಗೆ ಸಾಂತ್ವಾನ ಹೇಳಿದರು .

ಸದರಿ ವಿದ್ಯಾರ್ಥಿನಿಯರು ಕೆಪಿಎಸ್ ಪ್ರೌಢಶಾಲೆ ಶೆಟ್ಟಿಹಳ್ಳಿ ಇಲ್ಲಿ ವ್ಯಾಸಂಗ ಮಾಡುತ್ತಿದ್ದು ದಿನಾಂಕ 24.3.206 ರ ರಾತ್ರಿ ತಂದೆಯು ಸಾವನ್ನಪ್ಪಿರುವುದರ ಶೋಕದ ನಡುವೆಯೂ ದಿನಾಂಕ 25-03-26 ರಂದು ನಡೆದ ಎಸ್ ಎಸ್ ಎಲ್ ಸಿ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಅವರು ವಿದ್ಯಾರ್ಥಿಗಳನ್ನು ಇಂದು ಶಾಲೆಗೆ ಕರೆತಂದು, ಮಕ್ಕಳಿಗೆ ಧೈರ್ಯವನ್ನು ಹೇಳಿ, ಅವರ ಮುಂದಿನ ಭವಿಷ್ಯಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ ಅಗತ್ಯತೆ ಇರುವ ಸಹಾಯವನ್ನು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ವತಿಯಿಂದ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿರುತ್ತಾರೆ.

ಈ ವಿದ್ಯಾರ್ಥಿನಿಯರ ಅನುಕರಣೀಯ ಕಾರ್ಯವು ಹೇಮಂತ್. ಎನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾ ಪಂಚಾಯತ್ ಶಿವಮೊಗ್ಗ ಮತ್ತು ಮಂಜುನಾಥ್ ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಗಮನದಲ್ಲಿದ್ದು ಇವರು ಈ ವಿದ್ಯಾರ್ಥಿಗಳಿಗೆ ಸಾಂತ್ವಾನವನ್ನು ತಿಳಿಸಿ, ಮುಂದಿನ ಅವರ ಭವಿಷ್ಯಕ್ಕೆ ಅಗತ್ಯ ಸಹಕಾರವಿರುವದಾಗಿ ತಿಳಿಸಿರುತ್ತಾರೆ.

Author