ಶಿವಮೊಗ್ಗ | ಕೆಎಸ್ ಆರ್ ಟಿಸಿ ಬಸ್ ಚಕ್ರಕ್ಕೆ ಸಿಲುಕಿ ನಾಡಬಾಂಬ್ ಸ್ಫೋಟ

ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಿರೇಕಲವತ್ತಿ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನ ಟಯರ್ ಗೆ ಸಿಲುಕಿ ಕೆಳಗೆ ನಾಡಬಾಂಬ್ ಒಂದು ಸ್ಫೋಟಗೊಂಡ ಘಟನೆ ವರದಿಯಾಗಿದೆ.

ಸ್ಫೋಟಕ್ಕೆ ಮೊದಲು ಕೇವಲ 7 ನಿಮಿಷಗಳ ಹಿಂದೆ 45 ವಿದ್ಯಾರ್ಥಿಗಳು ಬಸ್‌ನಿಂದ ಇಳಿದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದೆ. ಸೋಮವಾರ ಸಂಜೆ ಘಟನೆ ನಡೆದಿದೆ.

ಬಸ್ ಮುಡಬಸಿದ್ದಾಪುರದಿಂದ ಶಿಕಾರಿಪುರಕ್ಕೆ ಆಗಮಿಸುತ್ತಿತ್ತು. ಬಸ್ ಹಿರೇಕಲವತ್ತಿ ಗ್ರಾಮಕ್ಕೆ ಬರುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಜೋರಾದ ಸ್ಫೋಟದ ಸದ್ದಿನಿಂದಾಗಿ ಬಸ್ ತಕ್ಷಣವೇ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿದ್ದ ಟಿಸಿಗೆ (ವಿದ್ಯುತ್ ಪರಿವರ್ತಕಕ್ಕೆ) ಡಿಕ್ಕಿ ಹೊಡೆದು ಅಲ್ಲೆ ನಿಂತಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲವೆಂದು ವರದಿಯಾಗಿದೆ.

ನಾಡ ಬಾಂಬ್ ಸ್ಫೋಟಗೋಳ್ಳುವ ಮೊದಲು ಕೇವಲ 7 ನಿಮಿಷದ ಹಿಂದೆ 45 ವಿದ್ಯಾರ್ಥಿಗಳು ಬಸ್ಸಿನಿಂದ ಹಿಂದಿನ ಸ್ಟಾಪ್‌ನಲ್ಲಿ ಇಳಿದಿದ್ದರು. ಬಸ್ಸಿನ ಟೈರ್ ಅಂಚಿಗೆ (ರಿಮ್‌ಗೆ) ನಾಡಬಾಂಬ್ ತಗುಲಿ ಸ್ಫೋಟಗೊಂಡಿದ್ದರಿಂದ ದುರಂತದ ಪ್ರಮಾಣ ಕಡಿಮೆ ಆಗಿದೆ. ಒಂದು ವೇಳೆ ಬಾಂಬ್ ಟೈರ್‌ಗಳ ನಡುವೆ ಅಥವಾ ಬಸ್‌ನ ಮುಖ್ಯ ಭಾಗದ ಅಡಿಯಲ್ಲಿ ಸ್ಫೋಟಗೊಂಡಿದ್ದರೆ, ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಭಾರಿ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳು ಸಂಭವಿಸುತ್ತಿದ್ದವು.

ಘಟನೆಯ ನಂತರ ಪ್ರತಿಕ್ರಿಯಿಸಿದ ಬಸ್ ಚಾಲಕ ಬಸವರಾಜ್ ಅವರು, ‘ನಾಡಬಾಂಬ್ ಸ್ಫೋಟಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ’ ಎಂದು ತಿಳಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸ್ಫೋಟದ ಹಿಂದಿನ ಉದ್ದೇಶ ಮತ್ತು ಬಾಂಬ್ ಇಟ್ಟವರು ಯಾರು ಎಂಬುದರ ಬಗ್ಗೆ ತನಿಖೆ ಚುರುಕುಗೊಂಡಿದೆ.

Author