ಮಗನ ಬೈಕ್ ಕ್ರೇಜ್, ಪಾಲಕರಿಗೆ ಶಾಕ್ ; ₹54 ಸಾವಿರ ದಂಡದ ಬಿಸಿ

ಉತ್ತರ ಕನ್ನಡ

ಕುಮಟಾ, “ನಮ್ಮ ಮಗ ಚೆನ್ನಾಗಿ ಗಾಡಿ ಓಡಿಸುತ್ತಾನೆ” ಎಂಬ ಪೋಷಕರ ಅತಿಯಾದ ಆತ್ಮವಿಶ್ವಾಸ ಮತ್ತು ಪ್ರೀತಿಯೇ ಈಗ ಅವರ ಜೇಬಿಗೆ ಕತ್ತರಿ ಹಾಕಿದೆ. ಕುಮಟಾದಲ್ಲಿ ನಡೆದ ಈ ಘಟನೆ ಪೋಷಕರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.

ಕೇವಲ ಒಂದು ಕ್ಷಣದ ನಿರ್ಲಕ್ಷ್ಯ ಮತ್ತು ಕಾನೂನಿನ ಬಗೆಗಿನ ಉದಾಸೀನತೆ ಇಬ್ಬರು ಪಾಲಕರಿಗೆ ಬರೋಬ್ಬರಿ 54,000 ರೂಪಾಯಿಗಳ ಭಾರಿ ದಂಡವನ್ನು ತಂದಿಟ್ಟಿದೆ.

ಈ ಘಟನೆಯ ಕೇಂದ್ರಬಿಂದು ಕುಮಟಾದ ರಸ್ತೆಗಳು. ಅಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಪೊಲೀಸ್ ನಿರೀಕ್ಷಕ ಯೋಗೇಶ ಕೆ.ಎಂ. ಅವರ ತಂಡಕ್ಕೆ ಅನಿರೀಕ್ಷಿತವಾಗಿ ಬಾಲಕರಿಬ್ಬರು ಬೈಕ್ ಚಲಾಯಿಸುತ್ತಿರುವುದು ಕಂಡುಬಂದಿತ್ತು.

“ನಮಗೆ ಲೈಸೆನ್ಸ್ ಇಲ್ಲ ಸರ್” ಎಂಬ ಆ ಬಾಲಕರ ಮುಗ್ಧ ಮಾತುಗಳು ಅವರ ಪೋಷಕರ ಪಾಲಿಗೆ ದೊಡ್ಡ ಸಂಕಷ್ಟವನ್ನೇ ತಂದೊಡ್ಡಿದವು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬೈಕ್ ಮಾಲೀಕರನ್ನು ನ್ಯಾಯಾಲಯದ ಕಟಕಟೆಗೆ ಎಳೆದು ತಂದರು.

ನ್ಯಾಯಾಲಯದ ವಿಚಾರಣೆಯ ವೇಳೆ ಪೋಷಕರ ವಾದಗಳು ಫಲ ನೀಡಲಿಲ್ಲ. ಅಪ್ರಾಪ್ತರಿಗೆ ವಾಹನ ನೀಡಿದ ಇಬ್ಬರು ಪೋಷಕರಿಗೆ ಕ್ರಮವಾಗಿ 25,500 ರೂ. ಹಾಗೂ 28,500 ರೂ. ದಂಡ ವಿಧಿಸಿ ಜೆ.ಎಂ.ಎಫ್.ಸಿ ನ್ಯಾಯಾಲಯ ಕಠಿಣ ಆದೇಶ ಹೊರಡಿಸಿತು.

ಅಪ್ರಾಪ್ತರಿಗೆ ವಾಹನ ನೀಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂಬ ಸಂದೇಶವನ್ನು ರವಾನಿಸಿದೆ.

Author