ಶಿವಮೊಗ್ಗ | ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣವೇ ನನ್ನ ಏಕೈಕ ಪ್ರಮುಖ ಗುರಿ : ಸಚಿವ ಮಧು ಬಂಗಾರಪ್ಪ

ರಾಜಕೀಯ

ಶಿವಮೊಗ್ಗ, ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳ ಸಬಲೀಕರಣವೇ ನನ್ನ ಇಲಾಖೆಯ ಮುಂದಿರುವ ಏಕೈಕ ಮತ್ತು ಪ್ರಮುಖ ಗುರಿಯಾಗಿದ್ದು, ಬಜೆಟ್‌ನಲ್ಲಿ ಕೈಬಿಟ್ಟಿರುವ ಅನುದಾನವನ್ನು ಹೆಚ್ಚುವರಿ ಅನುದಾನದ ಮೂಲಕ ಭರ್ತಿ ಮಾಡಲಾಗುವುದು ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಶಾಲೆಗಳ ಮುಚ್ಚುವಿಕೆ ಕುರಿತು ಹಿಂದಿನ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ನಮ್ಮ ಸರ್ಕಾರದ ಅವಧಿಗಿಂತ ಬಿಜೆಪಿ ಆಡಳಿತದಲ್ಲಿ ಅತಿ ಹೆಚ್ಚು ಕನ್ನಡ ಶಾಲೆಗಳು ಮುಚ್ಚಲ್ಪಟ್ಟಿವೆ. ಆದರೆ ನಾನು ಕೇವಲ ಟೀಕೆ ಮಾಡದೆ, ಶಾಲಾ ಕಟ್ಟಡಗಳ ಸುಧಾರಣೆ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಬದ್ಧನಾಗಿದ್ದೇನೆ.

ಪ್ರಸ್ತುತ ಆಯವ್ಯಯದಲ್ಲಿ ಘೋಷಣೆಯಾಗದಿದ್ದರೂ, ಸಿಎಂ ಸಿದ್ದರಾಮಯ್ಯ ಅವರು ಪೂರಕ ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೇಸಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು.

ಅಲ್ಲದೆ, ರಾಜ್ಯದಲ್ಲಿ ಇಂಧನ ಅಥವಾ ಅನಿಲದ ಕೊರತೆಯಿದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ನನ್ನ ಮೇಲಿದೆ. ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲದೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಜಯಭೇರಿ ಬಾರಿಸುತ್ತೇವೆ ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದ ಸಭೆಯ ಕುರಿತು ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಶಾಸಕರು ಸಭೆ ನಡೆಸುವುದು ತಪ್ಪಲ್ಲ, ಎಲ್ಲರಿಗೂ ಅವಕಾಶಗಳು ಸಿಗಬೇಕು ಎಂದು ಮಾರ್ಮಿಕವಾಗಿ ಉತ್ತರಿಸಿದರು.

Author