ಶಿವಮೊಗ್ಗ, ಕೇಂದ್ರ ಸರ್ಕಾರ ಅಗತ್ಯ ವಸ್ತುಗಳು ಮತ್ತು ಅಡುಗೆ ಅನಿಲ ಹಾಗೂ ವಾಣಿಜ್ಯ ಬಳಕೆಯ ಅನಿಲ ಮತ್ತು ಡೀಸೆಲ್-ಪೆಟ್ರೋಲ್ ಬೆಲೆ ಏರಿಕೆ ಮಾಡಿ, ಜನಸಾಮಾನ್ಯರ ಮೇಲೆ ಗಧಾಪ್ರಹಾರ ಮಾಡಿದ್ದನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಶಿವಪ್ಪನಾಯಕ ವೃತ್ತದಲ್ಲಿ ಕಟ್ಟಿಗೆ ಒಲೆಯಲ್ಲಿ ಹಚ್ಚಿ ಚಹಾ ತಯಾರಿಸಿ, ಸಾರ್ವಜನಿಕರಿಗೆ ವಿತರಿ ಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಿಶ್ವಗುರು ಅಲ್ಲ ಎಂಬುದು ಸಾಬೀತಾಗಿದೆ. ಅವರು ದುರ್ಬಲರಾಗಿರುವುದಕ್ಕೆ ಕೇಂದ್ರ ಸರ್ಕಾರ ಈ ರೀತಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆದಿದೆ. ಅವರು ದೇಶದ ಜನರ ಕ್ಷಮೆ ಕೇಳಬೇಕು. ತಾವು ದುರ್ಬಲರು ಎಂಬುದನ್ನು ಒಪ್ಪಿಕೊಳ್ಳಬೇಕು. ಸಿಲಿಂಡರ್ ಬೆಲೆ ಇಳಿಕೆಯಾಗುವವರೆಗೆ ಮಹಿಳೆಯರ ಹೋರಾಟ ನಿರ೦ತರವಾಗಿ ಮುಂದುವರೆಯಲಿದೆ ಎಂದರು.
ಅಡುಗೆ ಅನಿಲದ ದರ ಎರಿಸಿ ಬಡವರ ಮೇಲೆ ಬರೆ ಎಳೆದಿದೆ. ದಿನಬಳಕೆ ಗ್ಯಾಸ್ ಸಿಲಿಂಡರ್ ಮೇಲೆ ೬೦ ರೂ. ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್ ಮೇಲೆ ೧೧೫ ರೂ. ಬೆಲೆ ಏರಿಸಿ ತನ್ನ ದಿವಾಳಿತನವನ್ನು ತೋರಿಸಿದೆ.
ರಾಜ್ಯ ಸರ್ಕಾರ ಮಹಿಳೆಯರಿಗೆ ಅನ್ನ ಭಾಗ್ಯ, ಶಕ್ತಿಯೋಜನೆ, ಗೃಹಲಕ್ಷ್ಮೀ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದರೆ ಕೇಂದ್ರ ಸರ್ಕಾರ ಮಹಿಳೆಯ ಮೇಲೆ ಬೆಲೆ ಏರಿಕೆಯ ಗದಾಪ್ರಹಾರ ಮಾಡಿದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಹಾಲಪ್ಪ, ಭಾರತೀ ರಾಮಕೃಷ್ಣ, ಸುವರ್ಣಾ ನಾಗರಾಜ್, sವ್ಯಾ ಕೃಷ್ಣಮೂರ್ತಿ, ಯಮುನಾ ರಂಗೇಗೌಡ, ಪ್ರಭಾವತಿ ಚಂದ್ರಶೇಖರ್, ನಾಗರತ್ನ, ಕವಿತಾ, ವೇದಾ ವಿಜಯಕುಮಾರ್, ವಿಜಯ್ ಲಕ್ಷ್ಮೀ ಸಿ. ಪಾಟೀಲ್ ಇದ್ದರು.



