ರಾಜ್ಯದಲ್ಲಿ ಏ. 15 ರಿಂದ ಶಿಕ್ಷಕರಿಗೆ 3 ನೇ ಗಣತಿ ಹೊಣೆ

ಬೆಂಗಳೂರು

ಬೆಂಗಳೂರು, ಶಿಕ್ಷಕರಿಗೆ ಗಣತಿ ಹೊರೆ ತಪ್ಪುತ್ತಿಲ್ಲ. ಒಂದಾದ ನಂತರ ಒಂದು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡುತ್ತಲೇ ಇರುತ್ತಾರೆ. ಇದೀಗ ಒಂದೇ ವರ್ಷದಲ್ಲಿ 3 ನೇ ಬಾರಿಗೆ ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಏಪ್ರಿಲ್ 15 ರಿಂದ ಮೇ 15 ರವರೆಗೆ ‘ಮನೆಗಳ ಪಟ್ಟಿ ಮತ್ತು ವಸತಿ ಗಣತಿ’ ಪ್ರಕ್ರಿಯೆ ನಡೆಯುತ್ತಿದೆ. ಈ ಗಣತಿ ಕಾರ್ಯಕ್ಕೆ ಶಿಕ್ಷಕರನ್ನು ಬಳಸಿಕೊಳ್ಳುವಂತೆ ಜನಗಣತಿ ನಿರ್ದೇಶನಾಲಯ ಸೂಚನೆ ನೀಡಿದೆ.

ಈ ಮೂಲಕ ಒಂದು ವರ್ಷದಲ್ಲಿ 3 ನೇ ಬಾರಿಗೆ ಗಣತಿದಾರರಾಗಿ ಕೆಲಸ ನಿಭಾಯಿಸುವ ಹೊಣೆ ಶಿಕ್ಷಕರ ಹೆಗಲೇರಲಿದೆ. ಎರಡನೇ ಹಂತದಲ್ಲಿ 2027 ರ ಮಾರ್ಚ್ ತಿಂಗಳಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ.

ಇಲ್ಲಿ ಇನ್ನೊಂದು ಮುಖ್ಯವಾದ ವಿಷಯವೆಂದರೆ, ಗಣತಿ ಮಾಡುವ ಅವಧಿಯಲ್ಲಿ ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕೂಡಾ ನಡೆಯಲಿದೆ. ಈ ವೇಳೆ ಬಿಎಲ್‌ಒ ಆಗಿ ಕೆಲಸ ನಿರ್ವಹಿಸುವ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳಬಾರದು ಎಂದು ನಿರ್ದೇಶನಾಲಯ ಸೂಚನೆ ನೀಡಿದೆ.

ಒಂದು ವೇಳೆ ಶಿಕ್ಷಕರ ಕೊರತೆ ಆದರೆ ಯಾವುದೇ ಇಲಾಖೆಯ ‘ ಸಿ’ ವೃಂದದ ಅಧಿಕಾರಿಗಳನ್ನು ಬಳಸಿಕೊಳ್ಳುವಂತೆ ತಿಳಿಸಲಾಗಿದೆ.ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಗಣತಿ ನಡೆಯಲಿದೆ. ಇದಕ್ಕೆ ಪೂರಕ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತದೆ. ಜಿಲ್ಲಾಮಟ್ಟದಲ್ಲಿ ಅಧಿಕಾರಿಗಳಿಗೆ 3 ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.

Author