ಶಿವಮೊಗ್ಗ ನಗರದ ಊರಗಡೂರಿನಲ್ಲಿ ಎಸ್ಎಸ್ಎಲ್ಸಿ ಓದುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿರುವ ದುರ್ಘಟನೆ ಸೋಮವಾರ ನಡೆದಿದೆ.ಮೃತ ವಿದ್ಯಾರ್ಥಿ ಊರಗಡೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದನು.
ಪರೀಕ್ಷೆ ಹಿನ್ನೆಲೆ ನಡೆಯುತ್ತಿದ್ದ ವಿಶೇಷ ತರಗತಿಗೆ ಹಾಜರಾಗಿ ಮನೆಗೆ ತೆರಳುತ್ತಿದ್ದ ವೇಳೆ ಶಾಲೆಯಿಂದ ಅನತಿ ದೂರದಲ್ಲಿ 3–4 ಅಪ್ರಾಪ್ತ ಬಾಲಕರ ಗುಂಪು ಹಲ್ಲೆ ನಡೆಸಿದರೆಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ.
ಊರಗಡೂರು (9ನೇ ತಿರುವು) -ಎಸ್ಎಸ್ಎಲ್ಸಿ ವಿಶೇಷ ತರಬೇತಿ ತರಗತಿ ಮುಗಿಸಿ ಹೊರಬಂದ ತಕ್ಷಣ ನಡೆದ ಗಲಾಟೆಯಲ್ಲಿ ಅಪ್ರಾಪ್ತ ಬಾಲಕನೊಬ್ಬನನ್ನು ಸಹಪಾಠಿಗಳು ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ.

ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ. ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.
ಮೃತ ಬಾಲಕನನ್ನು ಸಂಕೇತ್ (15) ಎಂದು ಗುರುತಿಸಲಾಗಿದ್ದು, ಊರಗಡೂರು ನಿವಾಸಿ ಕುಮಾರ್ ಅವರ ಪುತ್ರನಾಗಿದ್ದಾನೆ. ಕುಮಾರ್ ಅವರು ಚಾಲಕ ವೃತ್ತಿ ಮಾಡಿಕೊಂಡಿದ್ದಾರೆ.

ಊರಗಡೂರಿನ 9ನೇ ತಿರುವಿನ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಕಳೆದ ಎರಡು ತಿಂಗಳಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ತರಗತಿ ನಡೆಯುತ್ತಿದ್ದು, ಇಂದು ಸಂಜೆ ಸುಮಾರು 8 ಗಂಟೆಗೆ ತರಗತಿ ಮುಗಿದ ನಂತರ ಹರೀಶ್ ಹಾಗೂ ಇತರೆ ಸಹಪಾಠಿಗಳೊಂದಿಗೆ ಸಂಕೇತ್ಗೆ ಗಲಾಟೆ ನಡೆದಿದೆ. ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡು ಕೊನೆಗೆ ಸಂಕೇತ್ನ ಹತ್ಯೆಗೆ ಕಾರಣವಾಗಿದೆ.
ಸ್ಥಳೀಯ ಮಾಹಿತಿಯ ಪ್ರಕಾರ, ಕ್ರಿಕೆಟ್ ಆಟದ ವಿಚಾರವೇ ಗಲಾಟೆಗೆ ಕಾರಣ ಎನ್ನಲಾಗಿದೆ. ಹತ್ಯೆ ನಡೆಸಿದ ಆರೋಪಿಗಳಾದ ಮೂವರು ಬಾಲಕರು ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಸುದ್ದಿ ತಿಳಿದ ಕೂಡಲೇ ಮೃತ ಬಾಲಕನ ಸಂಬಂಧಿಕರು ಹಾಗೂ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸ್ಥಳದಲ್ಲಿದ್ದ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಿದರು. ಪ್ರಕರಣ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಘಟನೆಯ ಹಿನ್ನೆಲೆಯಲ್ಲಿ ನಗರಾದ್ಯಂತ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಶಾಂತಿ ಕಾಪಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.



