ಬೆಂಗಳೂರು, ಆರ್‌ಸಿಬಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರಿಯರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ.
ಮುಂಬರುವ ಐಪಿಎಲ್ನ ಉದ್ಘಾಟನಾ ಪಂದ್ಯ ಸೇರಿದಂತೆ ಮ್ಯಾಚ್ಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಷರತ್ತುಬದ್ದ ಅನುಮತಿ ನೀಡಲಾಗಿದೆ.ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕ್ರೀಡಾಂಗಣದ ಸಾಮರ್ಥ್ಯದಷ್ಟು ಮಾತ್ರ ಟಿಕೆಟ್ ಮಾರಾಟ ಮಾಡಬೇಕು, ಜನದಟ್ಟಣೆ ಅಗತ್ಯಕ್ಕೆ ತಕ್ಕಂತೆ ದೊಡ್ಡ ಗೇಟ್ಗಳ ಅಳವಡಿಕೆ, ಆಂಬ್ಯುಲೆನ್ಸ್ ನಿಯೋಜನೆ ಸೇರಿದಂತೆ ನಿವೃತ್ತ ನ್ಯಾ.ಕುನ್ಹಾ ಅವರ ವರದಿಯ ಶಿಫಾರಸುಗಳ ಅನುಗುಣವಾಗಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
ಗುರುವಾರ ಬೆಳಗ್ಗೆ ವಿಧಾನಸೌಧದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸುವ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಸಲಾಗಿತ್ತು.
ಸಭೆಯಲ್ಲಿ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಜಿಬಿಎ ಆಯುಕ್ತ ಮಹೇಶ್ವರ್ ರಾವ್, ಗೃಹ ಇಲಾಖೆ ಕಾರ್ಯದರ್ಶಿ ಕೆ.ವಿ.ಶರತ್‌ಚಂದ್ರ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕೆಎಸ್‌ಸಿಎ ಕಾರ್ಯದರ್ಶಿ ಹಾಗೂ ಆರ್‌ಸಿಬಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಪಂದ್ಯ ನಡೆಸಲು ಸಹಮತ ವ್ಯಕ್ತವಾಗಿತ್ತು. ಅಂತಿಮ ತೀರ್ಮಾನವನ್ನು ಸಂಪುಟ ಸಭೆಗೆ ಬಿಡಲಾಗಿತ್ತು.ಕಳೆದ ಜೂನ್ 4ರಂದು ನಡೆದ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಕೊನೆಯುಸಿರೆಳೆದಿದ್ದರು.
ಇದಾದ ಬಳಿಕ ಚಿನ್ನಸ್ವಾಮಿ ಮೈದಾನದಲ್ಲಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯಗಳು ನಡೆದಿರಲಿಲ್ಲ. ತದನಂತರ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿತ್ತು. ಆಯೋಗ ಮುಂಜಾಗ್ರತಾ ಕ್ರಮಗಳೊಂದಿಗೆ ಕೆಲ ಶಿಫಾರಸುಗಳನ್ನು ಮಾಡಿತ್ತು.
ಪಂದ್ಯ ನಡೆಸುವ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (KSCA) ತೆಗೆದುಕೊಳ್ಳುವ ಮುಂಜಾಗ್ರತಾ ಕ್ರಮಗಳ ಅಂಶಗಳನ್ನು ಒಳಗೊಂಡ ನಕ್ಷೆಗಳೊಂದಿಗಿನ ವಿವರವಾದ ಪ್ರಸ್ತಾವನೆಯ ಮೂಲಕ ಅಧಿಕೃತವಾಗಿ ಭರವಸೆ ನೀಡಿತ್ತು.
ಪ್ರಸ್ತಾವನೆಯಲ್ಲಿ ಎಲ್ಲಾ ಶಿಫಾರಸುಗಳನ್ನು ಹಂತ, ಹಂತವಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದೆ. ಐಪಿಎಲ್-2026ಕ್ಕೆ ಅಗತ್ಯವಿರುವ ಮೊದಲ ಹಂತದ ಪ್ರಮುಖ ಜನಸಂದಣಿ ಸುರಕ್ಷತಾ ಕ್ರಮಗಳನ್ನು ಟೂರ್ನಮೆಂಟ್ ಆರಂಭಕ್ಕೂ ಮುನ್ನವೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದೆ



