ಜಾಲತಾಣದಲ್ಲಿ ಮಾನಹಾನಿ, ಪ್ರಚೋದನೆ, ಆಕ್ಷೇಪಾರ್ಹ ಹೇಳಿಕೆ ವಿರುದ್ಧ ದೂರು ದಾಖಲು ; ಪೊಲೀಸರಿಗೆ ಮಾರ್ಗಸೂಚಿ

ಬೆಂಗಳೂರು

ಬೆಂಗಳೂರು, ಮಾನಹಾನಿ, ಆಕ್ಷೇಪಾರ್ಹ ಹೇಳಿಕೆ ಸೇರಿದಂತೆ ಪ್ರಚೋದಿಸುವ ವ್ಯಕ್ತಿಗಳ ಬಗ್ಗೆ ಎಫ್ಐಆರ್ ದಾಖಲಿಸಿಕೊಳ್ಳುವ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪೊಲೀಸ್ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎನ್.ಸಲೀಂ ಅವರು ಆದೇಶ ಹೊರಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿರುವ ಪೋಸ್ಟ್ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳುವಾಗ ಮಾರ್ಗಸೂಚಿಯಲ್ಲಿರುವ ಎಂಟು ಅಂಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಎಲ್ಲಾ ಪೊಲೀಸ್ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.

ಆದೇಶದ ಅಂಶಗಳು:

ವ್ಯಕ್ತಿಗಳ ವಿರುದ್ಧ ಮಾನಹಾನಿಯಾಗಿದೆ ಎಂದು‌ ದೂರುವ ವ್ಯಕ್ತಿಯಿಂದ ಪ್ರಕರಣ ದಾಖಲಿಸಿಕೊಳ್ಳಬೇಕು.

ಗಂಭೀರ ಅಪಾದನೆಗಳು ಬಂದಾಗ ಮಾತ್ರ ಅನ್ಯರಿಂದ ದೂರು ಬಂದರೆ ಪರಿಗಣಿಸಬಹುದು.ದೂರಿನಲ್ಲಿ ಉಲ್ಲೇಖಿತ ಆಪಾದನೆಗಳು ಮೇಲ್ನೋಟಕ್ಕೆ ನಿಜವಾಗಿರಬೇಕು.‌ ಈ ಬಗ್ಗೆ ಪ್ರಾಥಮಿಕ ವಿಚಾರಣೆಯ ಬಳಿಕವಷ್ಟೇ ಪ್ರಕರಣ ದಾಖಲಿಸಬೇಕು.

ದ್ವೇಷ ಬಿತ್ತುವುದು, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವುದು ಅಥವಾ ದೇಶದ್ರೋಹದಂತಹ ಆರೋಪಗಳಿದ್ದಾಗ, ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಸ್ಪಷ್ಟ ಸಾಕ್ಷ್ಯಗಳಿದ್ದರೆ ಮಾತ್ರ ಪ್ರಕರಣ ದಾಖಲಿಸಬೇಕು.

ರಾಜಕೀಯವಾಗಿ ಕಟುಟೀಕೆ, ಆಕ್ಷೇಪಾರ್ಹ ಹೇಳಿಕೆ ಆಧರಿಸಿ ಯಾಂತ್ರಿಕವಾಗಿ ಕೇಸ್ ಮಾಡಬಾರದು. ಸಂವಿಧಾನದ 19 (1) ವಾಕ್ ಸ್ವಾತಂತ್ರ್ಯ ಅವಕಾಶ‌ ನೀಡಬೇಕು. ಪೋಸ್ಟ್​ನಿಂದ ಶಾಂತಿಗೆ ಭಂಗ ಸಾಧ್ಯತೆ ಕಂಡುಬಂದರೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು.

ಮಾನಹಾನಿ ‘ಅಸಂಜ್ಞೇಯ ಅಪರಾಧ’ ಆಗಿರುವುದರಿಂದ ಪೊಲೀಸರು ನೇರವಾಗಿ ಎಫ್‌ಐಆರ್ ದಾಖಲಿಸುವಂತಿಲ್ಲ. ದೂರುದಾರರಿಗೆ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್) ಮೊರೆ ಹೋಗಲು ಸೂಚಿಸಬೇಕು.

ರಾಜಕೀಯ ಆಧಾರಿತ ಪೋಸ್ಟ್ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವ ಮುನ್ನ ಸರ್ಕಾರಿ ಅಭಿಯೋಜಕರೊಂದಿಗೆ ಚರ್ಚಿಸಬೇಕು. ಅನಗತ್ಯ ಹಾಗೂ ಯಾಂತ್ರಿಕವಾಗಿ ಯಾರನ್ನೂ ಬಂಧಿಸದಂತೆ ಪೊಲೀಸರಿಗೆ ತಿಳಿಸಲಾಗಿದೆ.

ಬರುವ ದೂರುಗಳು ಸುಳ್ಳು, ದ್ವೇಷಪೂರಿತ ಅಥವಾ ರಾಜಕೀಯ ಪ್ರೇರಿತ ಎಂದು ಕಂಡುಬಂದರೆ, ಅಂತಹ ಪ್ರಕರಣಗಳನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್ 176(1) ಅಡಿಯಲ್ಲಿ ಮುಕ್ತಾಯಗೊಳಿಸಬೇಕು.

Author