ಶಿವಮೊಗ್ಗ, ತಮ್ಮ ಪತ್ನಿ ಪ್ರಿಯತಾ ಆರ್. ಸ್ವಯಂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಂಡಿದ್ದು, ತನ್ನಷ್ಟಕ್ಕೆ ತಾನು ಇರದೆ ನನಗೆ ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳಿಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಳ್ಳುವಂತೆ ಒತ್ತಾಯ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದು, ಪತ್ನಿಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಬಿ. ವಿನಯ್ ಪೇಪರ್ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
2011ರಲ್ಲಿ ನಾನು ಮತ್ತು ಹಾಸನ ಜಿಲ್ಲೆಯ ಪ್ರಿಯತಾ ಬೇಲೂರು ತಾಲೂಕಿನ ಹಳೇಬಿಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಲಿಂಗಾಯತ ಕುಂಬಾರ ಪದ್ಧತಿಯಂತೆ ಶಾಸ್ಟ್ರೋಕ್ತವಾಗಿ ಮದುವೆಯಾಗಿದ್ದು, ನಮಗೆ ಯೋಜ್ಞಾ (14) ಮನೋಜ್ಞಾ (8) ಇಬ್ಬರು ಜನಿಸಿದ್ದಾರೆ.

2015ರಲ್ಲಿ ಶಿವಮೊಗ್ಗದ ಪ್ರತಿಷ್ಟಿತ ಖಾಸಗಿ ಶಾಲೆ ಪೋದಾರ್ ಇಂಟರ್ ನ್ಯಾಷನಲ್ ಯಲ್ಲಿ ಪ್ರಿಯತಾ ಆರ್. ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದು, ಅಂದಿನಿಂದ ಅವಳು ನಮ್ಮ ಹಿಂದೂ ಸಂಪ್ರದಾಯವನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮದ ಕಡೆ ಆಸಕ್ತಿ ಹೊಂದಿ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಮರಿಯಾ ಪ್ರಿಯದರ್ಶಿನಿ ಸಹಾಯದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎಂದು ಬಿ.ವಿನಯ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಮತಾಂತರಗೊಂಡ ಪ್ರಿಯತಾ ಚರ್ಚ್ಗೆ ಹೋಗುವುದು ಬರುವುದು ಮಾಡುತ್ತಿದ್ದಳು. ಮನೆಯಲ್ಲಿ ಬೈಬಲ್ ತಂದು ಇಟ್ಟುಕೊಂಡು ಓದುತ್ತಿದ್ದಳು. ಜೊತೆಗೆ ಏಸುಕ್ರಿಸ್ತನನ್ನು ಪೂಜಿಸುತ್ತಿದ್ದಳು.
ಈ ಬಗ್ಗೆ ಹಲವಾರು ಬಾರಿ ಈರೀತಿ ಮಾಡದಂತೆ ಹೇಳಿದ್ದರೂ ಸಹ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿದ್ದೇನೆ. ನೀವು ಅದೇ ಧರ್ಮವನ್ನು ಪಾಲಿಸಿ ಎಂದು ಹೇಳುತ್ತಿದ್ದಳು. ನಾನು ಇದಕ್ಕೆ ಒಪುತ್ತಿರಲಿಲ್ಲ ಎಂದರು.
ನನ್ನ ಹಿರಿಯ ಮಗಳಿಗೂ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸುವಂತೆ ಒತ್ತಾಯಿಸುತ್ತಿದ್ದಳು. ಈ ಬಗ್ಗೆ ಮನೆಯಲ್ಲಿ ದಿನವೂ ಜಗಳವಾಗುತ್ತಿತ್ತು. 2019ರಲ್ಲಿ ನನ್ನ ಪತ್ನಿ ತವರಿಗೆ ಹೋಗಿದ್ದಳು. ಮಕ್ಕಳಿರುವ ಕಾರಣ ಅವರ ಜೀವನ ಹಾಳಾಗಬಾರದೆಂದು ಪತ್ನಿಗೆ ಮನೆಗೆ ಬರುವಂತೆ ವಿನಂತಿಸಿದ್ದರಿಂದ 2020ರಲ್ಲಿ ವಾಪಸ್ ಮನೆಗೆ ಬಂದಳು.

ಅವಳು ಬಂದಾಗಿನಿಂದ ಬೇರೆ ಬೇರೆ ರೀತಿಯೇ ವರ್ತಿಸುತ್ತಿದ್ದಳು. 2024ರಲ್ಲಿ ಪುನಃ ಪತ್ನಿ ಹೆಚ್ಚಾಗಿ ಕ್ರಿಶ್ಚಿಯನ್ ಧರ್ಮದ ವಿಧಿ ವಿಧಾನ ಅನುಸರಿಸುತ್ತಿದ್ದಳು. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವೆಬ್‌ಸೈಟ್ ಫಾಲೋ ಮಾಡಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ ಮಾಡುತ್ತಿದ್ದಳು. ನನಗೂ ಸಹ ಫಾಲೋ ಮಾಡಲು ಒತ್ತಾಯಿಸುತ್ತಿದ್ದು ಪ್ರಿಯತಾ ಪ್ರತಿ ತಿಂಗಳು 400 ರೂ. ಪಾವತಿಸುತ್ತಿದ್ದಳು ಎಂದರು.
ಕ್ರಿಶ್ಚಿಯನ್ ಧರ್ಮ ಆಚರಣೆ ಹೆಚ್ಚಾಗಿ ನನಗೆ ಮತ್ತು ನನ್ನ ಮಕ್ಕಳಿಗೆ ಮತಾಂತರಗೊಳ್ಳಲು ಪೀಡಿಸಲು ಆರಂಭಿಸಿದಳು. ನಾನು ಒಪ್ಪದೆ ಇದಿದ್ದರಿಂದ ನನಗೆ ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದಳು. ಅವಳ ಮಾತನ್ನು ಕೇಳದ ಕಾರಣ 2025ರಲ್ಲಿ ನನ್ನನ್ನು ಮತ್ತು ಮಕ್ಕಳನ್ನು ಬಿಟ್ಟು ತವರು ಮನೆಗೆ ಹೋದಳು. ಪ್ರಿಯತಾ ಅವರ ಸ್ನೇಹಿತೆ ತಿಳುವಳಿಕೆ ಹೇಳಿದಕ್ಕೆ ನಾನು ಮತ್ತು ಮಕ್ಕಳು ಮತಾಂತರಗೊಂಡರೆ ಮಾತ್ರ ನಾನು ಪುನಃ ಬರುತ್ತೇನೆ ಎಂದು ಹೇಳಿದಳು. ಆದರೂ ಮನೆಗೆ ಬಂದಿಲ್ಲ. ಆದ್ದರಿಂದ ಪತ್ನಿ ಪ್ರಿಯತಾ ವಿರುದ್ಧ ಕಾನೂನು ಜರುಗಿಸುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದರು.
ಪ್ರಿಯತಾ ಹಾಗೂ ಮರಿಯಾ ಅವರನ್ನು ಪೋದಾರ್ ಶಾಲೆಯಿಂದ ಕೆಲಸ ಬಿಡಿಸಲಾಗಿದೆ. ಈ ರೀತಿಯಾಗಿ ಬೇರೆ ಧರ್ಮದವರು ಸಹ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಬಾರದೆಂಬ ಕಳಕಳಿಯಿಂದ ನನ್ನ ಕಷ್ಟವನ್ನು ಸಮಾಜದ ಮುಂದೆ ಇಡುತ್ತಿದ್ದೇನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಸ್ವಾಮಿ ಉಪಸ್ಥಿತರಿದ್ದರು.



