ಶಿವಮೊಗ್ಗ | ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ ದುರುಳರಿಗೆ ಸಿಂಹ ಸ್ವಪ್ನವಾದ ಅಕ್ಕ ಪಡೆ

ಶಿವಮೊಗ್ಗ

ಶಿವಮೊಗ್ಗ, ಹಾಸ್ಟೆಲ್ ಒಂದರ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದವನನ್ನು ಅಕ್ಕ ಪಡೆ ಠಾಣೆಗೆ ಎಳೆದು ತಂದು ಕೇಸ್ ಹಾಕಿದೆ. ಮೂರು ತಿಂಗಳಿನಿಂದ ವ್ಯಕ್ತಿಯೊಬ್ಬ ಹಾಸ್ಟೆಲ್ ಒಂದರ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬರುತ್ತಿದ್ದನಂತೆ.

ಅಕ್ಕಪಡೆ ಶಾಲೆ ಹಾಸ್ಟೆಲ್​ಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರ ಫಲವಾಗಿ ವಿದ್ಯಾರ್ಥಿನಿ ಒಬ್ಬಳಿಗೆ ಮಾನಸಿಕ ಕಿರುಕುಳದ ಬಗ್ಗೆ ಅಕ್ಕಪಡೆಗೆ ಗೊತ್ತಾಗಿದೆ. ಹಾಗಾಗಿ ರೆಡ್ ಹ್ಯಾಂಡ್ ಆಗಿ ಹಿಡಿಯಲು ನಿರ್ಧರಿಸಿದ ಅಕ್ಕಪಡೆ ಫೆಬ್ರವರಿ 03 ರಂದು ಬೆಳಿಗ್ಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಠಾಣೆಗೆ ಕರೆತಂದಿದ್ದಾರೆ. ವಿಚಾರಣೆಗೆ ಒಳಪಡಿಸಿ Petty Case ದಾಖಲಿಸಿ ವಾರ್ನಿಂಗ್ ಕೊಟ್ಟಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ನಗರದಲ್ಲಿ ಇದೇ ರೀತಿಯ ಘಟನೆಯೊಂದು ವರದಿಯಾಗಿತ್ತು. ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರಿಗೆ ಅನಗತ್ಯವಾಗಿ ತೊಂದರೆ ನೀಡುತ್ತಿದ್ದ ಮತ್ತು ಕಿರುಕುಳ ಕೊಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಕ್ಕ ಪಡೆ ಪೊಲೀಸರು ವಶಕ್ಕೆ ಪಡೆದು ಬಿಸಿ ಮುಟ್ಟಿಸಿದ್ದರು.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಯಾರೇ ಆಗಲಿ ತೊಂದರೆ ಕೊಡುವುದು, ಹಿಂಬಾಲಿಸುವುದು ಅಥವಾ ಅಸಭ್ಯವಾಗಿ ವರ್ತಿಸುವುದು ಕಂಡುಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಸಾರ್ವಜನಿಕರು ಇಂತಹ ಘಟನೆಗಳು ಕಂಡುಬಂದಲ್ಲಿ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಬಹುದು.

Author