ಶಿವಮೊಗ್ಗ | 8-1೦ ದಿನದಲ್ಲಿ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಪರಿಹಾರ ಸಾಧ್ಯತೆ ; ವಿದಾಯದ ಸ್ನೇಹಕೂಟದಲ್ಲಿ ಡಿಸಿ ಗುರುದತ್ತ ಹೆಗಡೆ ಹೇಳಿಕೆ

ಶಿವಮೊಗ್ಗ

ಶಿವಮೊಗ್ಗ, ಶರಾವತಿ ಸಂತ್ರಸ್ಥರ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೇಳಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಲಾಗಿದೆ. ಇನ್ನು 8-10 ದಿನಗಳಲ್ಲಿ ಆ ಸಮಸ್ಯೆಗೆ ಒಂದು ಪರಿಹಾರ ಒದಗುವ ವಿಶ್ವಾಸವಿದೆ. ಹೊಸ ಜಿಲ್ಲಾಧಿಕಾರಿ ಅದರತ್ತ ಗಮನಹರಿಸುವರು ಎಂದು ಜಿಲ್ಲೆಯಿಂದ ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಅವರು ಮಾಧ್ಯಮದವರ ಜೊತೆ ಸ್ನೇಹಕೂಟದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಅರಣ್ಯ ಸಂಬಂಧಿ ಸಮಸ್ಯೆಗಳು, ಕಂದಾಯ ದಾಖಲೆ ಸಮಸ್ಯೆ, ಭೂಸ್ವಾಧೀನ ಪ್ರಕ್ರಿಯೆ, ಶರಾವತಿ ಸಂತ್ರಸ್ಥರ ಸಮಸ್ಯೆಗಳು ಮೊದಲಾದ ಅತ್ಯಂತ ಸವಾಲಿನ ಕೆಲಸವುಳ್ಳ ಜಿಲ್ಲೆ ಶಿವಮೊಗ್ಗ ಆಗಿದ್ದು, ಇಲ್ಲಿ ಕೆಲಸ ನಿರ್ವಹಿಸಿ ಇಲ್ಲಿನ ಸಾರ್ವಜನಿಕರು, ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಹೆಚ್ಚಿನ ಅಂಶಗಳನ್ನು ತಾವು ಕಲಿತಿರುವುದಾಗಿ ಹೇಳಿದರು.

2 ವರ್ಷಗಳಲ್ಲಿ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದ್ದು ಇದು ಪ್ರೇರಣೆ ನೀಡುವ ಜಾಗದ ಜೊತೆಗೆ ತಮ್ಮ ಅದೃಷ್ಟ ಎಂದ ಅವರು, ಬಿ.ಹೆಚ್.ರಸ್ತೆಯ ಹೆದ್ದಾರಿಗೆ ಸಂಬಂಧಿಸಿದಂತೆ 3೦ ಜಾಗಗಳಲ್ಲಿ ಭೂಮಿ ಸ್ವಾಧೀನ ಸಮಸ್ಯೆ ಬಗೆಹರಿಸಿದ ಸಮಾಧಾನ ತಮಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಹೇರಳ ಅವಕಾಶವಿದೆ. ಪರಿಸರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ 6೦ಕ್ಕೂ ಹೆಚ್ಚಿನ ಪ್ರವಾಸಿ ಸ್ಥಳದಲ್ಲಿ ಪ್ರವಾಸಿಗರ ಆಕರ್ಷಣೆಗೆ ಪ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ವಿಶ್ವಪ್ರಸಿದ್ಧ ಜೋಗ ಜಲಪಾತದ ಅಭಿವೃದ್ಧಿಗೆ ಇದ್ದ ಅಡೆ-ತಡೆ ನಿವಾರಿ ಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಯೊಡನೆ ತಾವು ಉತ್ತಮ ಸಂಬಂಧ ಹೊಂದಿದ್ದು, ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಒಳ್ಳೆಯ ರೀತಿಯಲ್ಲಿ ಇರುವಂತೆ ನೋಡಿಕೊಂಡಿದ್ದೇನೆ ಎಂದ ಅವರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಅವರ ಸಹಕಾರದೊಂದಿಗೆ ಮಿಷನ್ ಸುರಕ್ಷಾ ಯೋಜನೆ ಯನ್ನು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮುಜರಾಯಿ ಇಲಾಖೆಯ ಸುಮಾರು 8೦೦ ದೇವಾಲಯಗಳಿದ್ದು 3೦೦ ದೇವಾಲಯಗಳ ಸರ್ವೆಕಾರ್ಯ ಪೂರ್ಣ ಗೊಳಿಸಿ, ಉಸ್ತುವಾರಿ ಸಮಿತಿ ರಚಿಸಲಾಗಿದೆ. ಶರಾವತಿ ಸಂತ್ರಸ್ಥರ ಬಗ್ಗೆ ೯,೧೩೬ ಎಕರೆ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಸಮೀಕ್ಷೆ ಮಾಡಲಾಗಿದೆ. ಸುಮಾರು 2೦೦೦ ಅರ್ಜಿಗಳು ಬಂದಿದ್ದು, ಶರಾವತಿ ಸಂತ್ರಸ್ಥರ ಪಟ್ಟಿಯಿಂದ ಕೈಬಿಡಲಾಗಿದೆ ಎನ್ನಲಾಗಿದ್ದ 8೦೦ ಜನ ಸಂತ್ರಸ್ಥರು ಅರ್ಜಿ ಸಲ್ಲಿಸಿದ್ದು, ಅವರ ಅಹವಾ ಲುಗಳನ್ನು ಕೂಡ ಪಡೆದು ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 36,೦೦೦ ಎಕರೆ ಹಸಿರು ಅರಣ್ಯ ಇದೆ. ಡೀಮ್ಡ್ ಅರಣ್ಯದ ಕುರಿತು ಸಮೀಕ್ಷೆ ನಡೆಸಬೇಕಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಗೋಪಾಲ್ ಯಡಗೆರೆ ಉಪಸ್ಥಿತರಿದ್ದರು.

Author