ಭದ್ರಾವತಿ, ಬೈಕ್ನಲ್ಲಿ ಲಿಫ್ಟ್ ಪಡೆದು ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಬೈಕ್ ಪಲ್ಟಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಸೀತಾರಾಮಪುರ ಗ್ರಾಮದ ಸಮೀಪ ಸಂಭವಿಸಿದೆ.
ಕೂಡ್ಲಿಗೆರೆ ಗ್ರಾಮದ ಸುಬ್ರಹ್ಮಣ್ಯ ಬೀದಿಯ ನಿವಾಸಿ ಚಿದಾನಂದ ಕೆ. (48) ಮೃತಪಟ್ಟವರು. ಇವರು ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು.ನವೆಂಬರ್ 14ರ ರಾತ್ರಿ ಭದ್ರಾವತಿಯಲ್ಲಿ ಲಾರಿ ಚಾಲಕನ ಕೆಲಸ ಮುಗಿಸಿಕೊಂಡು ಚಿದಾನಂದ ಅವರು ತಮ್ಮ ಮನೆಗೆ ತೆರಳುತ್ತಿದ್ದರು. ಈ ವೇಳೆ ಭದ್ರಾವತಿಯಿಂದ ಕೂಡ್ಲಿಗೆರೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ಕೋಡಿಹೊಸೂರು ಗ್ರಾಮದವರ ಬಳಿ ಲಿಫ್ಟ್ ಕೇಳಿದ್ದಾರೆ.
ನಾಗೇಂದ್ರ ಅವರು ತಮ್ಮ KA-14-HE-0785 ನೋಂದಣಿ ಸಂಖ್ಯೆಯ ಬೈಕ್ನಲ್ಲಿ ಚಿದಾನಂದ ಅವರನ್ನು ಹಿಂಬದಿ ಸವಾರರನ್ನಾಗಿ ಕೂರಿಸಿಕೊಂಡು ಪ್ರಯಾಣ ಮುಂದುವರಿಸಿದ್ದಾರೆ. ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಭದ್ರಾವತಿ-ಚನ್ನಗಿರಿ ರಸ್ತೆಯ ಸೀತಾರಾಮಪುರ ಗ್ರಾಮದ ಬಂಡೆ ತಿಪ್ಪೇಶ್ ಅವರ ಮನೆಯ ಸಮೀಪ ಬರುತ್ತಿದ್ದಾಗ, ಬೈಕ್ ಅನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಬೈಕ್ ಸವಾರ ದಿಣ್ಣೆಯ ಬಳಿ ವಾಹನವನ್ನು ನಿಯಂತ್ರಿಸಲಾಗದೆ ರಸ್ತೆಯ ಮೇಲೆಯೇ ಬೈಕ್ ಪಲ್ಟಿ ಹೊಡೆಸಿದ್ದಾರೆ. ಪರಿಣಾಮ ಬೈಕ್ ಚಾಲಕ ಹಾಗೂ ಹಿಂಬದಿ ಸವಾರ ಚಿದಾನಂದ ಇಬ್ಬರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಗೆ ದಾಖಲಿಸಿದರೂ ಉಳಿಯದ ಜೀವ:
ಅಪಘಾತದ ಬಳಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಗಾಯಾಳುಗಳಿಗೆ ನೆರವಾಗಿದ್ದಾರೆ. ಇದೇ ವೇಳೆ ನಾಗೇಂದ್ರ ಅವರ ಮೊಬೈಲ್ಗೆ ಸ್ನೇಹಿತ ಪ್ರಶಾಂತ ಕರೆ ಮಾಡಿದ್ದು, ಅಪಘಾತದ ವಿಚಾರ ತಿಳಿದ ಬಳಿಕ ನಾಗೇಂದ್ರ ಅವರ ಅಣ್ಣ ಮುರುಗ ಅವರಿಗೆ ಮಾಹಿತಿ ನೀಡಿದ್ದಾರೆನಂತರ ಪ್ರಶಾಂತ, ಮುರುಗ ಹಾಗೂ ಅವರ ಸ್ನೇಹಿತರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಬ್ಬರನ್ನೂ ವಾಹನದ ಮೂಲಕ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಅಪಘಾತದಲ್ಲಿ ಚಿದಾನಂದ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಪೆಟ್ಟು ಬಿದ್ದಿದ್ದು, ಮೈಕೈಗಳಿಗೂ ಗಾಯಗಳಾಗಿದ್ದವು. ಬೈಕ್ ಚಾಲಕ ನಾಗೇಂದ್ರ ಅವರಿಗೂ ತಲೆ ಹಾಗೂ ದೇಹದ ಭಾಗಗಳಿಗೆ ತೀವ್ರ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇತ್ತ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿದಾನಂದ ಅವರು ಚಿಕಿತ್ಸೆಗೆ ಸ್ಪಂದಿಸದೆ ನವೆಂಬರ್ 15ರ ಬೆಳಿಗ್ಗೆ ಸುಮಾರು 10.20ಕ್ಕೆ ಮೃತಪಟ್ಟಿದ್ದಾರೆ.

