ಶಿವಮೊಗ್ಗ ರೈಲ್ವೆ ನಿಲ್ದಾಣದ ಫ್ಲೈ ಓವರ್ ಬಳಿ ಭೀಕರ ಸರಣಿ ಅಪಘಾತ ಫ್ಲೈಓವರ್‌ನಿಂದ ಕೆಳಗೆ ಜೋತಾಡಿದ ಆಟೋ ಚಾಲಕ

ಅವಘಡ ದುರಂತ

ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದ ಸಮೀಪದ ಶೇಷಾದ್ರಿಪುರಂ ಫ್ಲೈಓವರ್ ಮೇಲೆ ಕಾರು, ಬೈಕ್ ಹಾಗೂ ಆಟೋ ನಡುವೆ ಸರಣಿ ಡಿಕ್ಕಿ ಸಂಭವಿಸಿ ಭೀಕರ ಅಪಘಾತ ನಡೆದ ಘಟನೆ ಇಂದು ರಾತ್ರಿ ಸುಮಾರು 10 ಗಂಟೆ ವೇಳೆಗೆ ನಡೆದಿದೆ.ಅಪಘಾತದ ರಭಸಕ್ಕೆ ಆಟೋ ಚಾಲಕ ಫ್ಲೈಓವರ್ ಮೇಲಿನಿಂದ ಹಾರಿ ಪಿಲ್ಲರ್‌ನ ಪಕ್ಕದ ಕೆಳಭಾಗಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಕೆಳಗೆ ಬಿದ್ದಿದ್ದ ಆಟೋ ಚಾಲಕನನ್ನು ಸ್ಥಳೀಯ ಸಾರ್ವಜನಿಕರು ತಕ್ಷಣ ನೆರವಿಗೆ ಧಾವಿಸಿ, ಹರಸಾಹಸಪಟ್ಟು ಮೇಲಕ್ಕೆತ್ತಿದ್ದಾರೆ.

ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಹಾಗೂ ಬೈಕ್ ಸವಾರರಿಗೂ ತೀವ್ರ ಗಾಯಗಳಾಗಿದ್ದು, ಸ್ಥಳೀಯರು ಹಾಗೂ ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ತುರ್ತಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಕೆಲವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಸರಣಿ ಅಪಘಾತಕ್ಕೆ ಟ್ರಾಫಿಕ್ ಜಾಮ್ :

ಸರಣಿ ಅಪಘಾತದ ಪರಿಣಾಮ ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿಯ ಫ್ಲೈಓವರ್ ಮೇಲೆ ಕೆಲಕಾಲ ಸಂಚಾರಕ್ಕೆ ಅಡ್ಡಿಯುಂಟಾಗಿ ಟ್ರಾಫಿಕ್ ಜಾಮ್ ಉಂಟಾಯಿತು.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ 112 ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸುವ ಕಾರ್ಯ ಕೈಗೊಳ್ಳಲಾಯಿತು.

ಈ ಘಟನೆ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.

Author