ಒಂದು ದೇಶ, ಒಂದು ಚಂದಾದಾರಿಕೆ (One Nation One Subscription – ONOS) ವಿಶೇಷ ಕಾರ್ಯಾಗಾರ-ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನ್ಪೇಟೆ, ಶಿವಮೊಗ್ಗ ಜಿಲ್ಲೆ.ಇಲ್ಲಿನ ಜೇನುಗೂಡು ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಹಾಗೂ ಐ.ಟಿ. ಘಟಕದ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 30ರಂದು ‘ONOS Free Online E-Resources’ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಗಾರದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಬಿ. ಎಲ್. ರಾಜು ರವರು ಮಾತನಾಡುತ್ತಾ ವಿದ್ಯಾರ್ಥಿಗಳು ಗ್ರಂಥಾಲಯಗಳನ್ನು ಇಂದಿನ ಜಾಗತೀಕ ಯುಗದಲ್ಲಿ ಜಗತ್ತಿನ ಯಾವುದೇ ಭಾಗದ ಸಂಶೋಧನಾ ಗ್ರಂಥಗಳನ್ನು ಬಹು ಸುಲಭವಾಗಿ ಪಡೆಯಬಹುದು. ವಿದ್ಯಾರ್ಥಿಗಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮವಾದಂತಹ ಜರ್ನಲ್ ಪತ್ರಿಕೆಗಳ ಲೇಖನಗಳನ್ನು ಅಧ್ಯಯನ ಮಾಡಬೇಕು. ಹಾಗೂ ಬಾಬಾ ಸಾಹೇಬ್ ಡಾ.ಬಿ ಆರ್.ಅಂಬೇಡ್ಕರ್ ರಂತಹ ಮಹನೀಯರ ಮಾದರಿಯಲ್ಲಿ ಗ್ರಂಥಾಲಯಗಳನ್ನು ಬಳಸಿಕೊಳ್ಳಬೇಕು ,ಆಗ ಸಮಗ್ರ ವಿಚಾರಗಳನ್ನು ಗ್ರಹಿಸಲು ಸುಲಭ ಸಾಧ್ಯವಾಗುವುದು ಎಂದರು.
“ಗ್ರಂಥಾಲಯಗಳು ಕೇವಲ ಪುಸ್ತಕಗಳ ಸಂಗ್ರಹಾಲಯಗಳಾಗಿ ಉಳಿದಿಲ್ಲ, ಅವು ಜ್ಞಾನದ ಡಿಜಿಟಲ್ ಕೇಂದ್ರಗಳಾಗಿ ಮಾರ್ಪಟ್ಟಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ಶೈಕ್ಷಣಿಕ ಲೇಖನಗಳು ಮತ್ತು ಸಂಶೋಧನೆಗಳು ಉಚಿತವಾಗಿ ಸಿಗುತ್ತಿರುವುದು ಶೈಕ್ಷಣಿಕ ಕ್ಷೇತ್ರದ ದೊಡ್ಡ ಕ್ರಾಂತಿ. ಈ ONOS ಇ-ಸಂಪನ್ಮೂಲಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಅಧ್ಯಯನ ಮತ್ತು ಜ್ಞಾನಾರ್ಜನೆಗೆ ಗರಿಷ್ಠ ಮಟ್ಟದಲ್ಲಿ ಬಳಸಿಕೊಂಡು ಉನ್ನತ ಸಾಧನೆ ಮಾಡಬೇಕು” ಎಂದು ಕರೆ ನೀಡಿದರು.
ಕಾರ್ಯಗಾರದ ರುವಾರಿಗಳಾದ ಆಯ್ಕೆ ಶ್ರೇಣಿ ಗ್ರಂಥಪಾಲಕ ಡಾ. ರಾಜುನಾಯ್ಕ ಎಸ್. ರವರು ಮಾತನಾಡುತ್ತ ಇಂದಿನ ಸ್ಪರ್ಧಾತ್ಮಕ ಮತ್ತು ಡಿಜಿಟಲ್ ಯುಗದಲ್ಲಿ ಉನ್ನತ ಶಿಕ್ಷಣ, ಬೋಧನೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಇ-ಸಂಪನ್ಮೂಲಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಆಧುನಿಕ ತಂತ್ರಜ್ಞಾನದ ಮೂಲಕ ಲಭ್ಯವಿರುವ ಶೈಕ್ಷಣಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ IQAC ಸಂಯೋಜನಾಧಿಕಾರಿಗಳಾದ ಪ್ರೊ. ರಾಜು ಆರ್. ಕೆ. ಅವರು ಮಾತನಾಡಿ,”ಕಾಲೇಜಿನಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಸಂಶೋಧನಾ ಸಂಸ್ಕೃತಿಯನ್ನು ಹೆಚ್ಚಿಸುವಲ್ಲಿ ಇಂತಹ ಡಿಜಿಟಲ್ ಸಾಕ್ಷರತಾ ಕಾರ್ಯಾಗಾರಗಳು ದಾರಿದೀಪವಾಗಿವೆ. ಆಧುನಿಕ ತಂತ್ರಜ್ಞಾನ ಮತ್ತು ಆನ್ಲೈನ್ ಗ್ರಂಥಾಲಯಗಳ ಸರಿಯಾದ ಬಳಕೆ ವಿದ್ಯಾರ್ಥಿಗಳಲ್ಲಿ ಸ್ವಯಂ ಅಧ್ಯಯನ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಬೆಳೆಸುತ್ತದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಗಾರದ ಕೇಂದ್ರ ಬಿಂದು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶಿವಮೊಗ್ಗದ ಡಿ.ವಿ.ಎಸ್. ಕಲಾ ಮತ್ತು ವಿಜ್ಞಾನ ಕಾಲೇಜಿನ ಗ್ರಂಥಪಾಲಕರಾದ ಶ್ರೀ ನಿರಂಜನ್ ಕೆ. ಪರದೆಯ ಮೂಲಕ “ಒಂದು ದೇಶ, ಒಂದು ಚಂದಾದಾರಿಕೆ (One Nation One Subscription – ONOS) ಯೋಜನೆಯು ದೇಶದ ಉನ್ನತ ಶಿಕ್ಷಣ ಕ್ಷೇತ್ರದ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅಂತರರಾಷ್ಟ್ರೀಯ ಮಟ್ಟದ ಇ-ಜರ್ನಲ್ಗಳು ಹಾಗೂ ಶೈಕ್ಷಣಿಕ ಪ್ರಕಟಣೆಗಳನ್ನು ಸುಲಭವಾಗಿ ತಲುಪಿಸುವ ಮಹತ್ವದ ಯೋಜನೆಯಾಗಿದೆ” ಎಂದರು.ಅಲ್ಲದೆ, ONOS ಪೋರ್ಟಲ್ ಬಳಕೆ, ಶೈಕ್ಷಣಿಕ ಮಾಹಿತಿಯ ಹುಡುಕಾಟ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ವಿಧಾನಗಳ ಕುರಿತು ಪ್ರತ್ಯಕ್ಷ ಪ್ರಾತ್ಯಕ್ಷಿಕೆ (Demo) ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಕುಮಾರ ಎಂ. ಮುಖ್ಯಸ್ಥರು,ಕನ್ನಡ ವಿಭಾಗ, ಉಪನ್ಯಾಸಕರುಗಳಾದ ಡಾ. ಶಿವಾಜಿ ರಾವ್ ಹಾಗೂ ಶ್ರೀ ಮಹಮ್ಮದ್ ಕಲಿಲ್, ಸೈಯದ್ ಖಾನ್,ಡಾ.ಸುರೇಶ ಮತ್ತು ಕಾಲೇಜಿನ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಗಾರದಲ್ಲಿ ಅಂತಿಮ ಬಿ.ಎ. ವಿದ್ಯಾರ್ಥಿನಿ ಕುಮಾರಿ ಪುನೀತ ಎಂ.ಎಸ್ ನಿರೂಪಣೆ ಮಾಡಿದರು,ಹಾಗೂ ವಂದನಾರ್ಪಣೆಯನ್ನು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸುಬ್ರಹ್ಮಣ್ಯರವರು ನಡೆಸಿಕೊಟ್ಟರು.
