ಶಿವಮೊಗ್ಗ,ಕನ್ನಡ ನಾಡಿನ ಮಹಾನ್ ರಂಗಕರ್ಮಿ ಚಿದಂಬರರಾವ್ ಜಂಬೆ ಅವರು ನಿಧನರಾಗಿದ ಹಿನ್ನೆಲೆಯಲ್ಲಿ ಶ್ರೀಯುತರಿಗೆ ಸಾಗರ ಶಾಸಕರು ಮತ್ತು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ರವರು ಅಂತಿಮ ನಮನಗಳನ್ನು ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.

ಚಿದಂಬರರಾವ್ ಜಂಬೆ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅಡ್ಡೇರಿ ಗ್ರಾಮದವರು. ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರಾಗಿ, ಸಾಣೆಹಳ್ಳಿಯ ರಂಗ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿರುವ ಅವರು ಕರ್ನಾಟಕವಲ್ಲದೆ ಹೊರ ರಾಜ್ಯಗಳಲ್ಲೂ ರಂಗ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅವರಿಗೆ ಅನೇಕ ಗೌರವಗಳು ಸಂದಿವೆ.ಕುಟುಂಬದವರನ್ನು ಹಾಗೂ ಅಪಾರ ಶಿಷ್ಯ ಬಳಗವನ್ನು ಅಗಲಿರುವ ಶ್ರೀಯುತರಿಗೆ ಶ್ರದ್ಧಾ ಪೂರ್ವಕ ಅಂತಿಮ ನಮನಗಳನ್ನು ಶಾಸಕರು ಸಲ್ಲಿಸಿದರು.





