ವಂದೇ ಮಾತರಂ” ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ರಾಜ್ಯ ಸರ್ಕಾರ ಆದೇಶ

ಕರ್ನಾಟಕ

ಬೆಂಗಳೂರು,ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು ಹಾಗೂ ರಾಜ್ಯಪಾಲರು ಉಪಸ್ಥಿತರಿರುವ ಕಾರ್ಯಕ್ರಮಗಳನ್ನು ಹೊರತುಪಡಿಸಿ, ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ “ವಂದೇ ಮಾತರಂ” ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಆದೇಶಿಸಲಾಗಿದೆ.ಎಐಸಿಸಿ ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಅಷ್ಟೇ ಹಾಡಲು ನಿರ್ಣಯ ಕೈಗೊಂಡಿರುವ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರವೂ ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣ ಹಾಡಲು ತೀರ್ಮಾನಿಸಿದೆ‌.

ಆದೇಶದಲ್ಲಿ ಭಾರತದ ರಾಷ್ಟ್ರೀಯ ಚಳವಳಿಯ ಸಂದರ್ಭದಲ್ಲಿ ದೇಶದ ಜನರಲ್ಲಿ ರಾಷ್ಟ್ರೀಯತೆ, ಏಕತೆ ಮತ್ತು ದೇಶಭಕ್ತಿಯ ಭಾವನೆಯನ್ನು ಮೂಡಿಸುವಲ್ಲಿ “ವಂದೇ ಮಾತರಂ” ಗೀತೆಯು ಮಹತ್ವದ ಪಾತ್ರವನ್ನು ವಹಿಸಿರುತ್ತದೆ. ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ “ವಂದೇ ಮಾತರಂ” ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿ ಹಾಗೂ ವಿವಿಧ ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅದರ ಗಾಯನ ಅಥವಾ ವಾದನಕ್ಕೆ ಸಂಬಂಧಿಸಿದಂತೆ ಸಂದರ್ಭಾನುಸಾರ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ರಾಷ್ಟ್ರೀಯ ಗೀತೆಯ ವಾದನ ಮತ್ತು ಸಾಮೂಹಿಕ ಗಾಯನ ಕ್ಕೆ ಸಂಬಂಧಿಸಿದ ಸಂದರ್ಭಗಳನ್ನು ಪ್ರತ್ಯೇಕವಾಗಿ ನಿರ್ದಿಷ್ಟಪಡಿಸಲಾಗಿದೆ ಎಂದು ವಿವರಿಸಿದೆ.

ರಾಜ್ಯದಲ್ಲಿ ನಡೆಯುವ ವಿವಿಧ ಸರ್ಕಾರಿ ಕಾರ್ಯಕ್ರಮಗಳು ಮತ್ತು ಸಮಾರಂಭಗಳ ಸ್ವರೂಪ ಹಾಗೂ ಸಂದರ್ಭಕ್ಕೆ ಅನುಗುಣವಾಗಿ “ವಂದೇ ಮಾತರಂ” ರಾಷ್ಟ್ರೀಯ ಗೀತೆಯ ವಾದನ/ಗಾಯನಕ್ಕೆ ಸಂಬಂಧಿಸಿದಂತೆ ಏಕರೂಪತೆ, ಗೌರವ ಮತ್ತು ಸೂಕ್ತ ಶಿಷ್ಟಾಚಾರವನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಸರ್ಕಾರವು ಪರಿಗಣಿಸಿದೆ ಎಂದು ತಿಳಿಸಿದೆ

Author